
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರೂಪಿಸುವ ಕುರಿತು ಚರ್ಚಿಸಲು ಮಾರ್ಚ್ 19ರಂದು ಸಭೆ ಸೇರಲಿದ್ದು, ಪ್ರಣಾಳಿಕೆಗೆ ಅಂತಿಮ ರೂಪ ನೀಡಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಮಾರ್ಚ್ 19 ಮತ್ತು 20ರಂದು ಸಭೆ ಸೇರುವ ಸಾಧ್ಯತೆ ಇದ್ದು, ಲೋಕಸಭಾ ಚುನಾವಣೆಗೆ ಉಳಿದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ.
‘ಭಾಗೀದಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ ನ್ಯಾಯ’ ಮತ್ತು ‘ಯುವ ನ್ಯಾಯ’– ಈ ಐದು ‘ನ್ಯಾಯ’ಗಳು ಮತ್ತು ಒಂದು ‘ನ್ಯಾಯ’ಕ್ಕೆ ಐದು ಗ್ಯಾರಂಟಿಗಳಂತೆ ಒಟ್ಟು 25 ಗ್ಯಾರಂಟಿಗಳನ್ನು ಈಗಾಗಲೇ ಪಕ್ಷವು ಘೋಷಣೆ ಮಾಡಿದ್ದು, ಅವುಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
‘ಇವು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಗ್ಯಾರಂಟಿಗಳಲ್ಲ’ ಎಂದು ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮೋದಿ ಕಿ ಗ್ಯಾರಂಟಿ’ ಕುರಿತು ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ಇದುವರೆಗೆ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಒಟ್ಟು 82 ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.