ADVERTISEMENT

ಲೋಕಪಾಲಗೆ ₹5 ಕೋಟಿ ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳ ಖರೀದಿಗೆ ಟೆಂಡರ್‌

ಪಿಟಿಐ
Published 21 ಅಕ್ಟೋಬರ್ 2025, 13:51 IST
Last Updated 21 ಅಕ್ಟೋಬರ್ 2025, 13:51 IST
   

ನವದೆಹಲಿ: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ಲೋಕಪಾಲ’  ಅಂದಾಜು ₹5 ಕೋಟಿ ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಲು ಟೆಂಡರ್‌ ಆಹ್ವಾನಿಸಿದೆ.

‘ಬಿಎಂಡಬ್ಲ್ಯು 3 ಸರಣಿಯ 330ಎಲ್‌ಐ ಮಾದರಿಯ ಕಾರುಗಳನ್ನು ಪೂರೈಸಲು ಪ್ರತಿಷ್ಠಿತ ಏಜೆನ್ಸಿಗಳಿಂದ ಮುಕ್ತ ಟೆಂಡರ್‌ಗಳನ್ನು ಆಹ್ವಾನಿಸಿದೆ’ ಎಂದು ಲೋಕಪಾಲ ಸಂಸ್ಥೆ ಟೆಂಡರ್‌ನಲ್ಲಿ ಹೇಳಿದೆ.

ಬಿಎಂಡಬ್ಲ್ಯು ವೆಬ್‌ಸೈಟ್ ಪ್ರಕಾರ, 3 ಸರಣಿಯ ಉದ್ದನೆಯ ವೀಲ್‌ಬೇಸ್ ಕಾರು ಈ ವಿಭಾಗದಲ್ಲಿ ಅತ್ಯಂತ ಉದ್ದ ಮತ್ತು ಹೆಚ್ಚು ವಿಶಾಲವಾಗಿದೆ. ಐಷಾರಾಮಿ ಕ್ಯಾಬಿನ್‌ ಇದ್ದು, ಅತ್ಯುತ್ತಮ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ADVERTISEMENT

ಈ ಕಾರಿನ ಬೆಲೆ ನವದೆಹಲಿಯಲ್ಲಿ ಸುಮಾರು ₹69.5 ಲಕ್ಷ ಇದೆ.

ಲೋಕಪಾಲ ಸಂಸ್ಥೆಯಲ್ಲಿ ಒಟ್ಟು ಎಂಟು ಮಂಜೂರಾದ ಹುದ್ದೆಗಳಿವೆ. ಪ್ರಸ್ತುತ ಒಬ್ಬರು ಅಧ್ಯಕ್ಷರು ಮತ್ತು ಆರು ಸದಸ್ಯರು ಇದ್ದಾರೆ. 

‘ರಾಷ್ಟ್ರಪತಿ ಪ್ರಶ್ನಿಸಲಿ’
‘ಬಿಎಂಡಬ್ಲ್ಯು ಕಾರು ಖರೀದಿಗೆ ಟೆಂಡರ್‌ ಆಹ್ವಾನಿಸಿರುವ ಲೋಕಪಾಲ ಸಂಸ್ಥೆಯ ನಡೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶ್ನಿಸಬೇಕು’ ಎಂದು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಒತ್ತಾಯಿಸಿದೆ. ‘ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸಲು ಸ್ಥಾಪಿಸಲಾದ ಸಂಸ್ಥೆ ಲೋಕಪಾಲ. ಇಂತಹ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ತನ್ನ ಸದಸ್ಯರಿಗೆ ಐಷಾರಾಮಿಯಾದ 7 ಬಿಎಂಡಬ್ಲ್ಯು ಕಾರುಗಳನ್ನು ಬಯಸುತ್ತಿದೆ. ಇದು ಪ್ರಾಮಾಣಿಕ ತೆರಿಗೆದಾರರ ಹಣವನ್ನು ಲೂಟಿ ಮಾಡುವುದಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಕ್ಲೈಡ್‌ ಕ್ರಾಸ್ಟೊ ಆರೋಪಿಸಿದ್ದಾರೆ.