ADVERTISEMENT

ತಿಂಗಳ ಕಾಲ ಕೋವಿಡ್‌ ವಿರುದ್ಧ ಸೆಣಸಿದ ಲೋಕಪಾಲ ಸದಸ್ಯ ನ್ಯಾ.ತ್ರಿಪಾಠಿ ಕೊನೆಯುಸಿರು

​ಪ್ರಜಾವಾಣಿ ವಾರ್ತೆ
Published 3 ಮೇ 2020, 1:46 IST
Last Updated 3 ಮೇ 2020, 1:46 IST
   

ನವದೆಹಲಿ: ಒಂದು ತಿಂಗಳ ಕಾಲ ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸಿದ ಲೋಕಪಾಲದ ಸದಸ್ಯ ನ್ಯಾಯಮೂರ್ತಿ ಅಜಯ್‌ಕುಮಾರ್‌ ತ್ರಿಪಾಠಿ (63) ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಚತ್ತೀಸಗಡ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ತ್ರಿಪಾಠಿ ಅವರು ಶನಿವಾರ ರಾತ್ರಿ 8.30ರಲ್ಲಿ ದೆಹಲಿಯ ಏಮ್ಸ್‌ನ ಜೈ ಪ್ರಕಾಶ್ ನಾರಾಯಣ್ ಟ್ರಾಮಾ ಕೇಂದ್ರದಲ್ಲಿ ನಿಧನರಾದರು.

ಏಪ್ರಿಲ್ 2 ರಂದು ತ್ರಿಪಾಠಿ ಅವರು ಏಮ್ಸ್‌ಗೆ ದಾಖಲಾಗಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರನ್ನು ಏಮ್ಸ್‌ ಆವರಣದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿತ್ತು. ‌ಹದಿನೈದು ದಿನಗಳಿಂದ ವೆಂಟಿಲೇಟರ್‌ ವ್ಯವಸ್ಥೆಯಲ್ಲಿದ್ದ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಅವರ ಪುತ್ರಿ ಮತ್ತು ಮನೆಯ ಅಡುಗೆ ಕೆಲಸದಾತನಿಗೂ ಕೋವಿಡ್‌ ಸೋಂಕು ತಗುಲಿತ್ತು. ಆದರೆ, ಅವರು ಗುಣಮುಖರಾಗಿದ್ದಾರೆ.
ಕಳೆದ ವರ್ಷ ಮಾರ್ಚ್ 23 ರಂದು ಲೋಕಪಾಲದ ನಾಲ್ವರುನ್ಯಾಯಾಂಗ ಸದಸ್ಯರ ಪೈಕಿ ಒಬ್ಬರಾಗಿ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿತ್ತು.

ತ್ರಿಪಾಠಿ ಅವರ ನಿಧನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.