ADVERTISEMENT

ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ: ಅಲಹಾಬಾದ್‌ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 15:46 IST
Last Updated 20 ಸೆಪ್ಟೆಂಬರ್ 2023, 15:46 IST
.
.   

ಲಖನೌ: ಪ್ರೀತಿಸುವ ಸಂದರ್ಭದಲ್ಲಿ ಮಹಿಳೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಅನಂತರ ಯಾವುದೋ ಕಾರಣಕ್ಕಾಗಿ ಪ್ರೇಮಿ ಆಕೆಯನ್ನು ವಿವಾಹವಾಗಲು ನಿರಾಕರಿಸಿದರೆ, ಈ ಹಿಂದಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎನ್ನಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದೀರ್ಘಕಾಲದಿಂದ ಪ್ರಿಯತಮೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ವ್ಯಕ್ತಿ ಜಿಯಾವುಲ್ಲಾ ಅನಂತರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಹೀಗಾಗಿ ಅವರ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೀಶ್‌ ಕುಮಾರ್‌ ಗುಪ್ತಾ ನೇತೃತ್ವದ ಏಕಸದಸ್ಯ ಪೀಠವು ಹೀಗೆ ಅಭಿಪ್ರಾಯಪಟ್ಟಿದೆ.

ADVERTISEMENT

‘ಮಹಿಳೆ ಮತ್ತು ಆರೋಪಿ ಇಬ್ಬರೂ 15ಕ್ಕೂ ಹೆಚ್ಚು ವರ್ಷಗಳಿಂದ ಪರಿಚಯಸ್ಥರು. ಪೋಷಕರ ಒಪ್ಪಿಗೆಯ ಮೇರೆಗೆ ಅವರಿಬ್ಬರೂ ಕಳೆದ ಎಂಟು ವರ್ಷಗಳಿಂದ ಪರಿಸ್ಪರ ದೈಹಿಕ ಸಂಬಂಧ ಹೊಂದಿದ್ದರು. ಈ ಸಂಬಂಧವು ಆಕೆಯ ಇಚ್ಛೆಗೆ ವಿರುದ್ಧವಾಗಿ ಇರಲಿಲ್ಲ ಎಂಬುದು ಇಲ್ಲಿ ಗಮನಾರ್ಹ ವಿಚಾರ’ ಎಂದು ನ್ಯಾಯಾಲಯ ತಿಳಿಸಿದೆ. 

‘ಜಿಯಾವುಲ್ಲಾ ಮದುವೆಯಾಗಲು ನಿರಾಕರಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಆರಂಭದಲ್ಲಿ ಆರೋಪಿ ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿರಲಿಲ್ಲ. ಆದರೆ ಅನಂತರದ ಬೆಳವಣಿಗೆಗಳ ಕಾರಣದಿಂದ ಅವರು ಸಂತ್ರಸ್ತೆಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಹೀಗಾಗಿ ಇಬ್ಬರ ನಡುವಣ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರ ಎನ್ನಲಾಗದು’ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.