ಮುಂಬೈ/ಪುಣೆ: ‘ಸಂಘರ್ಷದ ವೇಳೆ ಆಗುವ ತಾತ್ಕಾಲಿಕ ನಷ್ಟಗಳು ಸಮರ್ಥವಾಗಿರುವ ಸೇನಾಪಡೆಗಳ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ. ಅಂತಿಮ ಫಲಿತಾಂಶ ಮುಖ್ಯವಾಗುವುದೇ ಹೊರತು ಇಂತಹ ಹಿನ್ನಡೆಗಳು ಅಲ್ಲ’ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ಈ ಮೂಲಕ, ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ದ ಆರಂಭಿಕ ಹಂತದಲ್ಲಿ ಭಾರತವು ಅನಿರ್ದಿಷ್ಟ ಸಂಖ್ಯೆಯ ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂದು ತಾವು ಒಪ್ಪಿಕೊಂಡಿದ್ದಕ್ಕಾಗಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳನ್ನು ಅವರು ತಳ್ಳಿಹಾಕಿದಂತಿತ್ತು.
ಅವರು ಇಲ್ಲಿನ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಡಿಫೆನ್ಸ್ ಅಂಡ್ ಸ್ಟ್ರ್ಯಾಟಜಿಕ್ ಸ್ಟಡೀಜ್ ಹಮ್ಮಿಕೊಂಡಿದ್ದ ‘ಭವಿಷ್ಯದ ಯುದ್ಧಗಳು ಹಾಗೂ ಯುದ್ಧತಂತ್ರಗಳು’ ಕುರಿತು ಮಾತನಾಡಿದರು.
ಕಳೆದ ವಾರ ಸಿಂಗಪುರದಲ್ಲಿ ಬ್ಲೂಮ್‌ಬರ್ಗ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನ ಕುರಿತು ಪ್ರಸ್ತಾಪಿಸಿದ ಅವರು, ‘ಭಾರತೀಯ ಸೇನೆ ಅನುಭವಿಸಿದ ನಷ್ಟಗಳ ಕುರಿತು ನನ್ನನ್ನು ಪ್ರಶ್ನಿಸಲಾಯಿತು. ಈ ನಷ್ಟಗಳು ಮಹತ್ವದ್ದಲ್ಲ. ಅಂತಿಮವಾಗಿ, ನಮಗೆ ಸಿಕ್ಕ ಫಲಿತಾಂಶ ಹಾಗೂ ನಾವು ಹೇಗೆ ಕಾರ್ಯಾಚರಣೆ ನಡೆಸಿದೆವು ಎನ್ನುವುದು ಮಹತ್ವದ್ದು ಎಂಬುದಾಗಿ ನಾನು ಉತ್ತರಿಸಿದ್ದೆ’ ಎಂದು ಜನರಲ್ ಚೌಹಾಣ್ ಹೇಳಿದರು.
‘ನಿರಂತರ ದಾಳಿಗಳ ಮೂಲಕ ಭಾರತದಲ್ಲಿ ರಕ್ತ ಹರಿಯುವಂತೆ ಮಾಡುವ ವಿಧಾನವನ್ನೇ ಪಾಕಿಸ್ತಾನ ಅನುಸರಿಸುತ್ತಾ ಬಂದಿದೆ. ಆದರೆ, ‘ಆಪರೇಷನ್ ಸಿಂಧೂರ’ದ ಮೂಲಕ ಗಡಿಯಾಚೆಯ ಭಯೋತ್ಪಾದನೆಗೆ ಭಾರತ ಹೊಸದಾದ ಅಡ್ಡಗೋಡೆಯನ್ನೇ ನಿರ್ಮಿಸಿದೆ.’ ಎಂದು ವಿಶ್ಲೇಷಿಸಿದರು.
ರಾಜಕೀಯ, ಹಿಂಸೆ ಸೇರಿದಂತೆ ಯುದ್ಧಕ್ಕೆ ಸಂಬಂಧಿಸಿದ ವಿವಿಧ ವಿದ್ಯಮಾನಗಳ ಕುರಿತು ಪ್ರಸ್ತಾಪಿಸಿದ ಅವರು, ‘ಆಪರೇಷನ್ ಸಿಂಧೂರ ವಿಚಾರದಲ್ಲಿಯೂ ವಾಗ್ವಾದ ಹಾಗೂ ರಾಜಕೀಯ ನಡೆಯುತ್ತಿದೆ’ ಎಂದರು.
‘ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆಯುವುದಕ್ಕೂ ಕೆಲವೇ ವಾರಗಳ ಮೊದಲು, ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸಿಮ್ ಮುನಿರ್, ಭಾರತ ಹಾಗೂ ಹಿಂದೂಗಳ ವಿರುದ್ಧ ವಿಷ ಕಾರುತ್ತಿದ್ದರು. ಭಾರತವನ್ನು ರಕ್ತಸಿಕ್ತವನ್ನಾಗಿ ಮಾಡಬೇಕು ಎಂಬ ಪಾಕಿಸ್ತಾನ ಅನುಸರಿಸುವ ವಿಧಾನವನ್ನು ಅವರ ಮಾತು ಒತ್ತಿ ಹೇಳಿದಂತಿತ್ತು’ ಎಂದು ಚೌಹಾಣ್ ಹೇಳಿದರು.
‘ಆಪರೇಷನ್ ಸಿಂಧೂರ’ ಮುಂದುವರಿದಿದ್ದರೆ ತಾನು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ಅರಿವಾದ ಕಾರಣ, ಮೇ 10ರಂದು ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ನಿರ್ಧರಿಸಿತು. ದಾಳಿಯನ್ನು ತೀವ್ರಗೊಳಿಸಿದಾಗ, ಆ ದಿನ ತಡರಾತ್ರಿ 1ರ ಸುಮಾರಿಗೆ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ, ಮಾತುಕತೆಗೆ ಅಂಗಲಾಚಿತು’ ಎಂದರು.
‘ತಾನು ಕೈಗೊಂಡ ಮಿಲಿಟರಿ ಕಾರ್ಯಾಚರಣೆ 48 ಗಂಟೆ ನಡೆಯಲಿದೆ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ, ಕಾರ್ಯಾಚರಣೆಯನ್ನು 8 ತಾಸಿಗೇ ಮೊಟಕುಗೊಳಿಸಿದ ಪಾಕಿಸ್ತಾನ, ಭಾರತದೊಂದಿಗೆ ಮಾತುಕತೆ ಬಯಸಿತು. ಉದ್ವಿಗ್ನತೆ ತಗ್ಗಿಸಲು ಹಾಗೂ ಮಾತುಕತೆಗೆ ಅದು ಮನವಿ ಮಾಡಿದಾಗ ನಾವೂ ಒಪ್ಪಿದೆವು ’ ಎಂದರು.
‘ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನದ ಎಷ್ಟು ಯುದ್ಧವಿಮಾನಗಳನ್ನು ಹೊಡೆದುರುಳಿಸಿವೆ, ಎಷ್ಟು ರೇಡಾರ್‌ಗಳನ್ನು ನಾಶ ಮಾಡಿವೆ ಎಂಬ ಬಗ್ಗೆ ಮಾಹಿತಿಯನ್ನು ಶೀಘ್ರದಲ್ಲಿಯೇ ದೇಶದ ಮುಂದಿಡಲಾಗುವುದು’ ಎಂದೂ ಜನರಲ್ ಚೌಹಾಣ್ ಹೇಳಿದರು.
ಪಹಲ್ಗಾಮ್‌ನಲ್ಲಿನ ಉಗ್ರರ ದಾಳಿಗೆ ಪ್ರತಿಯಾಗಿ ಆರಂಭಿಸಿದ ‘ಆಪರೇಷನ್ ಸಿಂಧೂರ’ದಲ್ಲಿ ಪಾಕಿಸ್ತಾನವನ್ನು ಭಾರತ ಇನ್ನಿಂಗ್ಸ್‌ನಿಂದ ಸೋಲಿಸಿತು ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿದರು.
ಸಂವಾದದ ವೇಳೆ ‘‘ಆಪರೇಷನ್ ಸಿಂಧೂರ’ ವೇಳೆ ಪಾಕಿಸ್ತಾನಕ್ಕೆ ಎಷ್ಟು ನಷ್ಟ ಉಂಟು ಮಾಡಲಾಗಿದೆ? ಭವಿಷ್ಯದ ಯುದ್ಧಗಳಿಗೆ ಸಂಬಂಧಿಸಿ ಯಾವ ಕಾರ್ಯತಂತ್ರ ಅನುಸರಿಸಲಾಗುತ್ತದೆ ಹಾಗೂ ಯುದ್ಧತಂತ್ರಗಳು ಹೇಗಿರಲಿವೆ’ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳನ್ನು ಉದಾಹರಿಸುವ ಮೂಲಕ ಲಘುಧಾಟಿಯಲ್ಲಿ ಉತ್ತರಿಸಿದರು.
‘ಫುಟ್ಬಾಲ್ ಪಂದ್ಯದಲ್ಲಿ ನೀವು 4–2 ಗೋಲುಗಳಿಂದ ಗೆಲ್ಲುತ್ತೀರಿ ಎಂದುಕೊಳ್ಳೋಣ. ಅಂದರೆ ಒಂದು ತಂಡ ನಾಲ್ಕು ಗೋಲುಗಳನ್ನು ಹೊಡೆದರೆ ಮತ್ತೊಂದು ತಂಡ ಎರಡು ಗೋಲು ಹೊಡೆದಂತಾಯಿತು’ ‘ಈಗ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಬರೋಣ. ನಿಮ್ಮ ತಂಡ ಎದುರಾಳಿ ತಂಡವನ್ನು ಒಂದು ಇನ್ನಿಂಗ್ಸ್‌ನಿಂದ ಪರಾಭವಗೊಳಿಸಿತು ಎಂದು ಭಾವಿಸೋಣ. ಇಂತಹ ಸನ್ನಿವೇಶದಲ್ಲಿ ಎಷ್ಟು ವಿಕೆಟ್‌ಗಳು..ಎಷ್ಟು ಚೆಂಡುಗಳು ಅಥವಾ ಎಷ್ಟು ಜನ ಆಟಗಾರರು ಎಂಬ ಪ್ರಶ್ನೆಗಳೇ ಉದ್ಭವಿಸುವುದಿಲ್ಲ’ ಎಂದು ಜನರಲ್ ಚೌಹಾಣ್ ವಿವರಿಸಿದಾಗ ಸಭಾಂಗಣವು ನಗು ಹಾಗೂ ಭಾರಿ ಚೆಪ್ಪಾಳೆಗಳಿಂದ ತುಂಬಿತು.
ಪಾಕಿಸ್ತಾನದ ಜೊತೆ ಈಚೆಗೆ ನಡೆದ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ಅನಿಲ್ ಚೌಹಾಣ್ ಶನಿವಾರ ಒಪ್ಪಿಕೊಂಡಿದ್ದರು. ಆದರೆ, ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿರುವುದು ‘ಸಂಪೂರ್ಣ ತಪ್ಪು’ ಎಂದು ಅವರು ‘ಬ್ಲೂಮ್‌ಬರ್ಗ್ ಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.