ADVERTISEMENT

ಕಾನೂನುಬಾಹಿರ ಧಾರ್ಮಿಕ ಮತಾಂತರ: ಉತ್ತರ ಪ್ರದೇಶದಲ್ಲಿ ಸುಗ್ರೀವಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 16:15 IST
Last Updated 28 ನವೆಂಬರ್ 2020, 16:15 IST
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್    

ಲಕ್ನೋ: ‘ಲವ್ ಜಿಹಾದ್’ ವಿರುದ್ಧ ಪರಿಣಾಮಕಾರಿ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಉತ್ತರ ಪ್ರದೇಶ ಸರ್ಕಾರ, ಕಾನೂನುಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದೆ.

‘ವಿವಾಹದ ಏಕೈಕ ಉದ್ದೇಶದಿಂದ ಮಾಡಲಾಗುವ ಮತಾಂತರವು ಮಾನ್ಯವಲ್ಲ’ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟವು ಕಾನೂನು ರಚನೆಗೆ ಸಮ್ಮತಿ ಸೂಚಿಸಿತ್ತು.

ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್‌ ಅವರು ಈ ಸಂಬಂಧದ ಸುಗ್ರೀವಾಜ್ಞೆಗೆ ಶನಿವಾರ ಅಂಕಿತ ಹಾಕಿದ್ದು, ಉತ್ತರ ಪ್ರದೇಶವು ತೀವ್ರ ಚರ್ಚೆಗೆ ಒಳಗಾಗಿರುವ ‘ಲವ್ ಜಿಹಾದ್’ಗೆ ಕಡಿವಾಣ ಹಾಕುವ ಕಾನೂನನ್ನು ಹೊಂದಲಿರುವ ದೇಶದ ಮೊದಲ ರಾಜ್ಯವಾಗಿದೆ.

ADVERTISEMENT

ಸುಗ್ರೀವಾಜ್ಞೆಯಲ್ಲಿ ‘ಲವ್ ಜಿಹಾದ್’ ಎಂಬ ಪದವನ್ನು ಬಳಸದಿದ್ದರೂ, ಬಲವಂತದ ಅಥವಾ ಮೋಸದ ಧಾರ್ಮಿಕ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ ಹಾಗೂ ಗರಿಷ್ಠ ₹ 50,000 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಆಮಿಷ ಮತ್ತಿತರ ಮೋಸದ ವಿಧಾನಗಳ ಮೂಲಕ ಅಥವಾ ವಿವಾಹದ ಉದ್ದೇಶಕ್ಕಾಗಿನ ಧಾರ್ಮಿಕ ಮತಾಂತರವು ಇನ್ನು ಅಪರಾಧದ ಸಾಲಿಗೆ ಸೇರಲಿದೆ. ಸಾಮೂಹಿಕ ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿರುವ ಸಂಘ– ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಲೂ ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಾಯ್ದೆ ಉಲ್ಲಂಘಿಸಿ ಮತಾಂತರ ಮಾಡಲಾಗಿಲ್ಲ ಎಂದು ಸಾಬೀತುಪಡಿಸುವ ಅವಕಾಶವನ್ನು ಮತಾಂತರಗೊಂಡ ವ್ಯಕ್ತಿ ಹಾಗೂ ಮತಾಂತರ ಮಾಡಿದ ವ್ಯಕ್ತಿಗೆ ನೀಡಲಾಗಿದೆ. ಆದರೆ, ವಿವಾಹದ ಉದ್ದೇಶದಿಂದ ಮತಾಂತರ ಮಾಡಿದ್ದರೆ, ಅಂತಹ ವಿವಾಹಗಳನ್ನು ಅನೂರ್ಜಿತ ಎಂದು ಘೋಷಿಸಲು ಈ ಕಾನೂನಿನ ಅಡಿ ಅವಕಾಶವಿದೆ.

ವಿವಾಹದ ಕಾರಣಕ್ಕೆ ಮತಾಂತರಗೊಳಿಸಿ ಕಾಯ್ದೆ ಉಲ್ಲಂಘಿಸಿದಲ್ಲಿ ಕನಿಷ್ಠ 1 ಹಾಗೂ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆಯೊಂದಿಗೆ ₹ 15,000 ದಂಡ ವಿಧಿಸಬಹುದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮತಾಂತರ ಪ್ರಕರಣದಲ್ಲಿ ಕನಿಷ್ಠ ಎರಡು ಮತ್ತು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಜೊತೆಗೆ ₹ 25 ಸಾವಿರ ದಂಡ ವಿಧಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.