ADVERTISEMENT

ಚಂಡಮಾರುತ: ತಮಿಳುನಾಡಿನ ಹಲವೆಡೆ ಭಾರಿ ಮಳೆ ಮುನ್ಸೂಚನೆ

ರಕ್ಷಣಾ ಕಾರ್ಯಕ್ಕಾಗಿ ಎನ್‌ಡಿಆರ್‌ಎಫ್‌ನ 10 ತಂಡಗಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 14:05 IST
Last Updated 6 ಡಿಸೆಂಬರ್ 2022, 14:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗುತ್ತಿದೆ. ಇದು ಬುಧವಾರದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.

ರಾಜ್ಯದ ಉತ್ತರ ಭಾಗದ ಜಿಲ್ಲೆಗಳು ಹಾಗೂ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯ ಕಾರಣ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) 10 ರಕ್ಷಣಾ ತಂಡಗಳನ್ನು ರಚಿಸಿದೆ.

ಚೆನ್ನೈ, ನಾಗಪಟ್ಟಣ, ಚೆಂಗಲ್‌ಪಟ್ಟು, ತಂಜಾವೂರು, ತಿರುವರೂರ್, ಕಡಲೂರು, ವಿಲ್ಲುಪುರಂ, ಮೈಲಾದುತುರೈ, ತಿರುವಳ್ಳೂರು ಹಾಗೂ ಕಾಂಚಿಪುರ ಜಿಲ್ಲೆಗಳಿಗೆ ಈ ತಂಡಗಳನ್ನು ಕಳುಹಿಸಲಾಗಿದ್ದು, ಯಾವುದೇ ಅವಘಡವನ್ನು ಎದುರಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.

ADVERTISEMENT

ಪ್ರವಾಹ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವುದು, ಕಟ್ಟಡಗಳು ಕುಸಿದಾಗ ಅವಶೇಷಗಳಡಿ ಸಿಲುಕಿದವರ ರಕ್ಷಣೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಸಂವಹನ ಸಾಧ್ಯವಾಗಿಸುವ ಸಾಧನಗಳನ್ನು ಹಾಗೂ ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಈ ತಂಡಗಳು ಹೊಂದಿವೆ.

ಅರಕ್ಕೋಣಂನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, 24 ಗಂಟೆಗಳ ಕಾಲ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್ಲ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

‘ಸಮುದ್ರಕ್ಕಿಳಿದಿರುವ ಮೀನುಗಾರರನ್ನು ಸಂಪರ್ಕಿಸಿ, ಮಾಹಿತಿ ನೀಡಲಾಗಿದ್ದು, ಎಲ್ಲರೂ ವಾಪಸಾಗುತ್ತಿದ್ದಾರೆ’ ಎಂದು ಕಂದಾಯ ಸಚಿವ ಕೆ.ಕೆ.ಎಸ್‌.ಎಸ್‌.ಆರ್‌ ರಾಮಚಂದ್ರನ್ ಹೇಳಿದರು.

‘ರಾಜ್ಯದಲ್ಲಿ 5,200 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚೆನ್ನೈನಲ್ಲಿ 169 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ್ದು, ರಸ್ತೆ, ಕಟ್ಟಡಗಳಲ್ಲಿ ನಿಲ್ಲುವ ಮಳೆ ನೀರು ತೆರವಿಗೆ 805 ಪಂಪ್‌ಸೆಟ್‌ಗಳನ್ನು ಸಿದ್ಧತೆಯಲ್ಲಿಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.