ADVERTISEMENT

ಉತ್ಪಾದನೆ, ಗುಣಮಟ್ಟ ಕುಸಿತ: ಕಾಶ್ಮೀರದ ಸೇಬು ಉದ್ಯಮಕ್ಕೆ ಭಾರಿ ಪೆಟ್ಟು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 8:36 IST
Last Updated 13 ಸೆಪ್ಟೆಂಬರ್ 2020, 8:36 IST
ಕಾಶ್ಮೀರದ ಸೇಬು– ಸಂಗ್ರಹ ಚಿತ್ರ 
ಕಾಶ್ಮೀರದ ಸೇಬು– ಸಂಗ್ರಹ ಚಿತ್ರ    

ಶ್ರೀನಗರ: ಉತ್ಪಾದನೆ ಹಾಗೂ ಗುಣಮಟ್ಟ ಕುಸಿದಿರುವುದರಿಂದ ಕಾಶ್ಮೀರದ ₹8,000 ಕೋಟಿ ವಹಿವಾಟಿನ ಸೇಬು ಉದ್ಯಮಕ್ಕೆ ಈ ವರ್ಷ ಭಾರಿ ಪೆಟ್ಟು ಬೀಳುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ನಡೆದ ಪ್ರತಿಭಟನೆಗಳು ಹಾಗೂ ಸರ್ಕಾರ ಹೇರಿದ ನಿರ್ಬಂಧಗಳಿಂದಾಗಿ ಕಳೆದ ವರ್ಷ ಸೇಬು ರಫ್ತಿನಲ್ಲಿ ಅಂದಾಜು ಒಂದು ಲಕ್ಷ ಮೆಟ್ರಿಕ್‌ ಟನ್‌ನಷ್ಟು ಕುಸಿತವಾಗಿತ್ತು.

‘ಕಳೆದ ವರ್ಷ ಸೇಬು ಉದ್ಯಮವು ಭಾರಿ ನಷ್ಟ ಅನುಭವಿಸಿತ್ತು. ಅದನ್ನು ಈ ವರ್ಷ ಸರಿದೂಗಿಸಿಕೊಳ್ಳಬಹುದೆಂಬ ನಂಬಿಕೆ ನಮ್ಮದಾಗಿತ್ತು. ಈ ಬಾರಿ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಆ ನಿರೀಕ್ಷೆಯೂ ಹುಸಿಯಾಗಿದೆ’ ಎಂದು ಉತ್ತರ ಕಾಶ್ಮೀರದ ಸೊಪೋರ್‌ ಪ್ರದೇಶದ ಸೇಬು ಬೆಳೆಗಾರ ಅಬ್ದುಲ್‌ ರಹೀಮ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆಯಲ್ಲಿ ಶೇಕಡ 30ರಿಂದ 40ರಷ್ಟು ಕುಸಿತವಾಗಿದೆ. ಉತ್ಪಾದನೆಯಷ್ಟೇ ಅಲ್ಲ. ಸೇಬುಗಳ ಗುಣಮಟ್ಟವೂ ಕುಸಿದಿದೆ. ಗುಣಮಟ್ಟದ ಕೀಟನಾಶಕಗಳನ್ನು ಬಳಸದೇ ಇರುವುದೂ ಉತ್ಪಾದನೆ ಇಳಿಕೆಗೆ ಕಾರಣ’ ಎಂದು ಅವರು ಹೇಳಿದ್ದಾರೆ.

‘ಮಾರುಕಟ್ಟೆಯಲ್ಲಿ ‘ಎ’ದರ್ಜೆಯ ಸೇಬುಗಳ ಕೊರತೆ ಇದೆ. ಹೀಗಾಗಿ ವಹಿವಾಟು ಕೂಡ ಕುಸಿತವಾಗಿದೆ’ ಎಂದು ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಹಣ್ಣಿನ ಮಂಡಿಯ ವರ್ತಕ ಬಿಲಾಲ್‌ ಅಹ್ಮದ್‌ ನುಡಿಯುತ್ತಾರೆ.

ಹವಾಮಾನ ವೈಪರೀತ್ಯ ಹಾಗೂ ಇತರ ಹಲವು ಕಾರಣಗಳಿಂದಾಗಿ ಸೇಬು ಉತ್ಪಾದನೆ ಕುಸಿತವಾಗುತ್ತಿದ್ದು, ಇದರಿಂದ ಸೇಬು ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಳೆ ವಿಮೆ ಯೋಜನೆ ಜಾರಿಗೊಳಿಸುವಂತೆ ಬೆಳೆಗಾರರು ಒತ್ತಾಯಿಸುತ್ತಲೇ ಇದ್ದಾರೆ.

‘ಬೆಳೆ ವಿಮೆ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ವಿಮಾ ಕಂಪನಿಯವರು ‘ಪ್ರೀಮಿಯಂ’ಗೆ ಬೇಡಿಕೆ ಇಡುತ್ತಿದ್ದು ಅದಕ್ಕೆ ಸರ್ಕಾರ ಹಾಗೂ ಬೆಳೆಗಾರರು ಒಪ್ಪುವ ಸಾಧ್ಯತೆ ಕಡಿಮೆ. ಇದರಿಂದ ಯೋಜನೆಯ ಅನುಷ್ಠಾನಕ್ಕೆ ತೊಡಕಾಗಿದೆ’ ಎಂದು ಕಾಶ್ಮೀರದ ತೋಟಗಾರಿಕೆ ಇಲಾಖೆಯ ನಿರ್ದೇಶಕ ಇಜಾಜ್‌ ಅಹ್ಮದ್‌ ಬಟ್‌ ತಿಳಿಸಿದ್ದಾರೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಾಶ್ಮೀರದಿಂದ ಪ್ರತಿವರ್ಷವೂ ಅಂದಾಜು 20 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಸೇಬು ರಫ್ತಾಗುತ್ತದೆ. ಇದರಿಂದಾಗಿ ತೋಟಗಾರಿಕೆ ಇಲಾಖೆಗೆ ಸುಮಾರು ₹8,000ರಿಂದ ₹9,000 ಕೋಟಿ ಆದಾಯ ಹರಿದುಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.