ADVERTISEMENT

ಲೋಕಸಭಾ ಚುನಾವಣೆ: ಭದ್ರತೆಗೆ 20 ಲಕ್ಷ ಪೊಲೀಸರು, 2.7 ಲಕ್ಷ ಅರೆಸೇನಾಪಡೆ ಸಿಬ್ಬಂದಿ

ಪಿಟಿಐ
Published 28 ಏಪ್ರಿಲ್ 2019, 9:52 IST
Last Updated 28 ಏಪ್ರಿಲ್ 2019, 9:52 IST
   

ನವದೆಹಲಿ:ದೇಶದಲ್ಲಿ ಈಗಾಗಲೇ ಮೂರು ಹಂತಗಳಲ್ಲಿ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದ್ದು, ಇನ್ನೂ ನಾಲ್ಕು ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. 2019ರ ಸಾರ್ವತ್ರಿಕ ಚುನಾವಣೆ ಸರಾಗವಾಗಿ ನಡೆಯಲು ಗೃಹ ಸಚಿವಾಲಯ ಹೆಚ್ಚಿನ ಭದ್ರತೆ ನಿಯೋಜಿಸಿದೆ. 20 ಲಕ್ಷ ಮಂದಿ ರಾಜ್ಯ ಪೊಲೀಸ್‌ ಸಿಬ್ಬಂದಿ, ಹೋಂ ಗಾರ್ಡ್‌ಗಳು ಹಾಗೂ 2.7 ಲಕ್ಷ ಅರೆ ಸೇನಾಪಡೆ ಸಿಬ್ಬಂದಿ ನಿಯೋಜಿಸಲಾಗಿದೆ.

ಏಳು ಹಂತಗಳ ಚುನಾವಣೆಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಅರೆ ಸೇನಾಪಡೆಯ 2,710 ಪಡೆಗಳನ್ನು ಲೋಕಸಭಾ ಚುನಾವಣೆ ಪ್ರಕ್ರಿಯೆ ಭದ್ರತೆಗೆ ನಿಯೋಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅರೆ ಸೇನಾಪಡೆಯ ಒಂದು ಪಡೆಯು 100 ಸಿಬ್ಬಂದಿ ಒಳಗೊಂಡಿರುತ್ತದೆ.

ADVERTISEMENT

ಪ್ರತಿ ರಾಜ್ಯದ ಪೊಲೀಸ್‌ ಪಡೆ ಹಾಗೂ ಹೋಂ ಗಾರ್ಡ್‌ಗಳು ಸೇರಿ ಒಟ್ಟು 20 ಲಕ್ಷ ಸಿಬ್ಬಂದಿಯೊಂದಿಗೆ ಅರೆ ಸೇನಾಪಡೆ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮತದಾನ ನಡೆಯುವ ಎಲ್ಲ ಮತಗಟ್ಟೆಗಳು, ಚುನಾವಣಾ ಪ್ರಕ್ರಿಯೆ ನಡೆಸುವ ಸಿಬ್ಬಂದಿ ಪ್ರಯಾಣದಲ್ಲಿ ಹಾಗೂ ಮತದಾನದ ನಂತರ ಇವಿಎಂಗಳನ್ನು ಇಡಲಾಗುವ ಸ್ಟ್ರಾಂಗ್‌ ರೂಂಗಳ ಭದ್ರತೆಯಲ್ಲಿ ಈ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತದಾನ ಪ್ರಕ್ರಿಯೆಗೆ ಅತಿ ಸೂಕ್ಷ್ಮ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿದರೆ, ಪಶ್ಚಿಮ ಬಂಗಾಳಗಳಲ್ಲಿ ಅತಿ ಹೆಚ್ಚು 41,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ.

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಎಸ್‌ಎಸ್‌ಬಿ, ಸಿಐಎಸ್‌ಎಫ್‌ ಹಾಗೂ ಭಾರತೀಯ ರೈಲ್ವೆ ಪಡೆಯ(ಐಆರ್‌ಬಿ) ಸಿಬ್ಬಂದಿಯನ್ನು ಚುನಾವಣಾ ಭದ್ರತೆ ಹೊತ್ತಿರುವಅರೆ ಸೇನಾಪಡೆ ಒಳಗೊಂಡಿದೆ. ವಿಶೇಷ ರೈಲ್ವೆ ಬೋಗಿಗಳು, ಟ್ರಕ್‌ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ನಿಗದಿತ ಮತಗಟ್ಟೆಗಳಿಗೆ ಭದ್ರತಾ ಸಿಬ್ಬಂದಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆಏಪ್ರಿಲ್‌ 11ರಿಂದ ಪ್ರಾರಂಭವಾಗಿದ್ದು ಮೇ 19ರವರೆಗೂ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.