ADVERTISEMENT

ನೂತನ ಸಂಸತ್‌ ಭವನದಲ್ಲಿ ‘ಬಾವಿ’ ತೆರವು ಸಲಹೆ ತಿರಸ್ಕರಿಸಿದ ಸಭಾಧ್ಯಕ್ಷ ಓಂ ಬಿರ್ಲಾ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 12:15 IST
Last Updated 7 ಜನವರಿ 2021, 12:15 IST
ಓಂ ಬಿರ್ಲಾ
ಓಂ ಬಿರ್ಲಾ   

ನವದೆಹಲಿ: ನೂತನವಾಗಿ ನಿರ್ಮಾಣಗೊಳ್ಳಲಿರುವ ಸಂಸತ್‌ ಭವನದೊಳಗಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ‘ಸದನದ ಬಾವಿ’ ( ಸ್ಪೀಕರ್‌ ಮುಂಭಾಗದ ಸ್ಥಳ) ತೆರವುಗೊಳಿಸಲು ಅಧಿಕಾರಿಯೊಬ್ಬರು ನೀಡಿದ್ದ ಸಲಹೆಯೊಂದನ್ನು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ತಿರಸ್ಕರಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯ ಕೊಠಡಿಗಳ ವಿನ್ಯಾಸದ ಕುರಿತು ನಡೆದ ಆಂತರಿಕ ಚರ್ಚೆಯ ವೇಳೆ, ಸದನದ ಬಾವಿಗಿಳಿದು ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರು ಈ ಸಲಹೆ ನೀಡಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಗಳ ಜಾರಿ ವೇಳೆ, ವಿಪಕ್ಷದ ಸದಸ್ಯರು ಅಧಿಕಾರಿಗಳು ಕುಳಿತಿದ್ದ ಸದನದ ಬಾವಿಗೆ ಏಕಾಏಕಿ ನುಗ್ಗಿದ್ದ ಘಟನೆಯನ್ನೂ ಇದೇ ವೇಳೆ ಅಧಿಕಾರಿ ಪ್ರಸ್ತಾಪಿಸಿದರು. ನಿಯಮ ಮೀರುವ ಸದಸ್ಯರು, ಸಭಾಪತಿ ಮತ್ತು ಸಭಾಧ್ಯಕ್ಷರ ಪೀಠಕ್ಕೆ ಸುಲಭವಾಗಿ ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಲೂ ಇದೇ ವೇಳೆ ಸಲಹೆ ನೀಡಲಾಯಿತು.

‘ಸಲಹೆಯನ್ನು ತಕ್ಷಣವೇ ಬಿರ್ಲಾ ತಿರಸ್ಕರಿಸಿದರು. ವಿಪಕ್ಷವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡಬಾರದು’ ಎಂದು ಬಿರ್ಲಾ ಹೇಳಿದರು ಎಂದು ಸಂಸತ್‌ನ ಮೂಲಗಳು ತಿಳಿಸಿವೆ.

ADVERTISEMENT

ಈ ಹಿಂದೆಯೂ ಹಲವು ಭಾರಿ ಸದನದೊಳಗೆ ಗಲಾಟೆಯಿಂದ ಕೂಡಿದ ಪ್ರತಿಭಟನೆಗಳು ನಡೆದಿವೆ. ಯುಪಿಎ ಅವಧಿಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ರಚನೆ, 2010ರಲ್ಲಿ 2ಜಿ ಹಗರಣ ಹಾಗೂ 2018ರಲ್ಲಿ ರಫೇಲ್‌ ಒಪ್ಪಂದದ ಕುರಿತು ನಡೆದ ಪ್ರತಿಭಟನೆ ವೇಳೆ ಸದನದ ಬಾವಿಯಲ್ಲಿ ಗದ್ದಲ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.