ADVERTISEMENT

ಸ್ವದೇಶಿಯಾಗಿ 9ಎಂಎಂ ಮೆಷಿನ್‌ ಪಿಸ್ತೂಲ್‌ ಅಭಿವೃದ್ಧಿ

ನಾಗ್ಪುರ ಮೂಲದ ಯುವಸೇನಾಧಿಕಾರಿಯಿಂದ ತಯಾರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 11:25 IST
Last Updated 16 ಜನವರಿ 2021, 11:25 IST
ಅಸ್ಮಿ
ಅಸ್ಮಿ   

ಮುಂಬೈ: ಮಹಾರಾಷ್ಟ್ರದ ನಾಗ್ಪುರ ಮೂಲದ ಯುವ ಸೇನಾಧಿಕಾರಿಯೊಬ್ಬರು ಭಾರತದ ಪ್ರಪ್ರಥಮ ಸ್ವದೇಶಿ ನಿರ್ಮಿತ 9ಎಂಎಂ ಮೆಷಿನ್‌ ಪಿಸ್ತೂಲ್‌ (ಅಸ್ಮಿ) ಅಭಿವೃದ್ಧಿಪಡಿಸಿದ್ದಾರೆ.

ಈ ಶಸ್ತ್ರವನ್ನು ಅಭಿವೃದ್ಧಿಪಡಿಸಿರುವ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಬನ್ಸೂದ್‌ ಪ್ರಸ್ತುತ ಮಧ್ಯಪ್ರದೇಶದ ಮಹೂವಿನಲ್ಲಿರುವ ಇನ್‌ಫೆಂಟ್ರಿ ಶಾಲೆಯಲ್ಲಿ ನಿಯೋಜನೆಗೊಂಡಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪುಣೆ ಮೂಲದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ (ಎಆರ್‌ಡಿಇ) ಸಹಯೋಗದಲ್ಲಿ ಅಸ್ಮಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಆತ್ಮಗೌರವ, ಹೆಮ್ಮೆ ಎಂಬ ಅರ್ಥಕ್ಕೆ ತಕ್ಕಂತೆ ಅಸ್ಮಿ ಅಭಿವೃದ್ಧಿಗೊಂಡಿದೆ.

9 ಎಂಎಂ ಗುಂಡುಗಳನ್ನು ಹಾರಿಸುವ ಸಾಮರ್ಥ್ಯವನ್ನು ಅಸ್ಮಿ ಹೊಂದಿದ್ದು, ವಿಮಾನ ತಯಾರಿಕೆಗೆ ಬಳಸುವ ಅಲ್ಯುಮಿನಿಯಂ ಬಳಸಿ ಇದರ ಮೇಲ್ಭಾಗವನ್ನು ನಿರ್ಮಿಸಲಾಗಿದೆ. ಕೆಳಭಾಗವನ್ನು ಕಾರ್ಬನ್‌ ಫೈಬರ್‌ನಲ್ಲಿ ಮಾಡಲಾಗಿದೆ. ಅಸ್ಮಿಯ ಟ್ರಿಗರ್‌ ಭಾಗವನ್ನು ಮೆಟಲ್‌ 3ಡಿ ಪ್ರಿಂಟಿಂಗ್ ಮುಖಾಂತರ ತಯಾರಿಸಲಾಗಿದೆ. ಎಂಟು ಇಂಚು ಉದ್ದದ ನಳಿಕೆ ಇದ್ದು, 33 ಸುತ್ತು ಗುಂಡುಗಳು ಹಿಡಿಸುವ ಮ್ಯಾಗಜಿನ್‌ ತಯಾರಿಸಲಾಗಿದೆ. ಗುಂಡುಗಳು ಇಲ್ಲದೇ ಅಸ್ಮಿಯು 2 ಕೆ.ಜಿಗಿಂತ ಕಡಿಮೆ ತೂಕ ಹೊಂದಿದೆ. ಅಸ್ಮಿಯ ಮೇಲ್ಭಾಗದಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಜೋಡಿಸಲು ಅನುಕೂಲವಾಗುವಂತೆ ‘ರೇಲ್‌’ ಅಳವಡಿಸಲಾಗಿದ್ದು, ಎಡ ಹಾಗೂ ಬಲಭಾಗದಲ್ಲಿ ಎಂ–ಸ್ಲಾಟ್‌ಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಉಗ್ರರ ವಿರುದ್ಧದ ಕಾರ್ಯಾಚರಣೆ, ಗಣ್ಯರ ರಕ್ಷಣೆ, ಟ್ಯಾಂಕ್‌ ಹಾಗೂ ಏರ್‌ಕ್ರಾಫ್ಟ್‌ ಸಿಬ್ಬಂದಿ ಸೇರಿದಂತೆ ಸೇನಾ ಪಡೆಗಳಲ್ಲಿ ಇದರ ಬಳಕೆಗೆ ಹೆಚ್ಚಿನ ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ಸೇವೆಗಳಿಗೆ ಮುಂದಿನ ದಿನಗಳಲ್ಲಿ ಅಸ್ಮಿ ಸೇರ್ಪಡೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಇದರ ಉತ್ಪಾದನಾ ವೆಚ್ಚವು ಪ್ರತಿ ಪಿಸ್ತೂಲ್‌ಗೆ ₹50 ಸಾವಿರದೊಳಗಿದ್ದು, ರಫ್ತಿಗೂ ಬೇಡಿಕೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.