
ಪ್ರಾತಿನಿಧಿಕ ಚಿತ್ರ
ಲಖನೌ: ಗಂಡ ತಮಾಷೆಗೆ 'ಮಂಗ' ಎಂದು ಕರೆದದ್ದರಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಖನೌನಲ್ಲಿ ಗುರುವಾರ ನಡೆದಿದೆ.
ಮೃತ ಮಹಿಳೆ ತನು ಸಿಂಗ್ ಅವರಿಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಇತ್ತು. ಹಾಗಾಗಿಯೇ, ಪತಿ ಮಾಡಿದ ತಮಾಷೆಯನ್ನು ಗಂಭೀರವಾಗಿ ಪರಿಗಣಿಸಿದ್ದರು ಎನ್ನಲಾಗಿದೆ.
ಲಖನೌನ ತಕ್ರೋಹಿ ಪ್ರದೇಶದ ನಿವಾಸಿ ರಾಹುಲ್ ಶ್ರೀವಾಸ್ತವ ಹಾಗೂ ತನು ಅವರು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಆಟೋ ಚಾಲಕನಾಗಿರುವ ರಾಹುಲ್ ಅವರು, ತನು ಅವರ ಕುರಿತು ತಮಾಷೆ ಮಾಡುತ್ತಾ 'ಬಂಡಾರಿಯಾ' (ಮಂಗ) ರೀತಿ ಕಾಣುತ್ತಿದ್ದೀಯ ಎಂದಿದ್ದರು. ಅದರಿಂದ ತನು ಬೇಸರಗೊಂಡಿದ್ದರು. ಕೂಡಲೇ ಎಚ್ಚೆತ್ತ ರಾಹುಲ್, ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದಾಗ್ಯೂ ತೀವ್ರವಾಗಿ ನೊಂದಿದ್ದ ಪತ್ನಿ, ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತುಂಬಾ ಸಮಯವಾದರೂ ಹೊರಗೆ ಬಾರದ ತನು ಅವರನ್ನು ಊಟಕ್ಕೆ ಕರೆಯಲೆಂದು ಕುಟುಂಬದ ಸದಸ್ಯರೊಬ್ಬರು ಕೋಣೆಗೆ ಹೋದಾಗ, ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದೂ ಹೇಳಿವೆ.
ಈ ಕುರಿತು ಮಾತನಾಡಿರುವ ಪೊಲೀಸರು, 'ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅನುಮಾನಗೊಳ್ಳುವಂತಹ ಯಾವುದೇ ಅಂಶಗಳು ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿಲ್ಲ' ಎಂದು ತಿಳಿಸಿದ್ದಾರೆ.
'ಈ ಸಂಬಂಧ ಯಾವುದೇ ದೂರು ಬಂದಿಲ್ಲ. ಬಂದರೆ, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಆರಂಭಿಸುತ್ತೇವೆ' ಎಂದೂ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.