ಶ್ರೀನಗರ: 'ಗುಂಪು ಹತ್ಯೆ' ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಗೆ ಭಾರತವನ್ನು ಹೋಲಿಸಿ ಪಿಡಿಪಿ ಮುಖ್ಯಸ್ಥೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕುಲ್ಗಾಮ್‌ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಫ್ತಿ, 'ನೆರೆಯ ಪಾಕಿಸ್ತಾನದಲ್ಲಿ ಗುಂಪು ಹಲ್ಲೆಯಿಂದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದಕ್ಕೆ ಆರು ಮಂದಿಯನ್ನು ಗಲ್ಲಿಗೇರಿಸಲಾಗಿದೆ ಮತ್ತು 12 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆದರೆ ಇಲ್ಲಿ, 2015ರಿಂದ ಎಷ್ಟು ಮಂದಿ ಅಖ್ಲಾಕ್‌ಗಳನ್ನು ಗುಂಪು ಹಲ್ಲೆ ಮೂಲಕ ಹತ್ಯೆಗೈಯಲಾಗಿದೆ?ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸುವುದನ್ನು ಬಿಡಿ, ಅವರಿಗೆ ಹೂಮಾಲೆ ಹಾಕಲಾಗಿದೆ. ಇಲ್ಲಿನ ನ್ಯಾಯಾಂಗ ವ್ಯವಸ್ಥೆಗೂ ಮತ್ತು ಅಲ್ಲಿನ ನ್ಯಾಯಾಂಗ ವ್ಯವಸ್ಥೆಗೂ ಇರುವ ವ್ಯತ್ಯಾಸವಿದು' ಎಂದು ಮುಫ್ತಿ ಟೀಕಿಸಿದ್ದಾರೆ.
'ಧರ್ಮಗಳ ಮಧ್ಯೆ ದ್ವೇಷವನ್ನು ಭಿತ್ತಿದ್ದನ್ನು ಬಿಟ್ಟರೆ ರಾಷ್ಟ್ರದ ಜನರಿಗೆ ಬಿಜೆಪಿ ಏನನ್ನೂ ಕೊಟ್ಟಿಲ್ಲ. ಅವರ ಬಳಿ ಯುವಕರಿಗೆ ಕೊಡಲು ಉದ್ಯೋಗಗಳಿಲ್ಲ. ಬೆಲೆಯೇರಿಕೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಅದರ ಬದಲು ರೈತರಿಂದ ತುಂಬ ಕನಿಷ್ಠ ಬೆಲೆ ಕೊಟ್ಟು ಅಕ್ಕಿಯನ್ನು ಕಿತ್ತುಕೊಂಡಿದ್ದಾರೆ. ಅದೇ ಅಕ್ಕಿಯನ್ನು ಕುಟುಂಬಕ್ಕೆ 5 ಕೆಜಿ ಉಚಿತವಾಗಿ ನೀಡುತ್ತಿದ್ದಾರೆ. ಹೀಗೆ ಈ ರಾಷ್ಟ್ರವನ್ನು ಮುನ್ನಡೆಸಲಾಗುತ್ತಿದೆ' ಎಂದು ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಮುಸ್ಲಿಮರನ್ನು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿಯಾಗಿಸಲಾಗುತ್ತಿದೆ. ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಹಿಂದೂ-ಮುಸ್ಲಿಂ ವಿವಾದಗಳನ್ನು ಕೆದಕಲಾಗುತ್ತಿದೆ. ಹಿಟ್ಲರ್‌ನಂತಹ ನಿಯಮಗಳನ್ನು ಹೊಂದಿದ್ದರೆ ಅದು ಎಲ್ಲರಿಗೂ ತಿಳಿಯಲಿ. ಮುಸ್ಲಿಮರನ್ನು ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ತಿಳಿಸಲಿ' ಎಂದಿದ್ದಾರೆ.
ಕಾಶ್ಮೀರಿ ಪ್ರತ್ಯೇಕವಾದಿ ಯಾಸಿನ್ ಮಲಿಕ್ಗೆ ಮರಣದಂಡನೆ ವಿಧಿಸಿ: ಎನ್ಐಎ
ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಹತ್ಯೆಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಸರ್ಕಾರವು 'ತೋಳ್ಬಲದ ನೀತಿ'ಯನ್ನು ನಿಲ್ಲಿಸುವವರೆಗೆ ಇಂತಹ ರಕ್ತಪಾತಗಳು ನಿಲ್ಲಬಹುದೆಂದು ನನಗೆ ತೋರುತ್ತಿಲ್ಲ ಎಂದು ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
'370ನೇ ವಿಧಿಯನ್ನು ತೆಗೆದು ಹಾಕಿದರೆ ಸಂಘರ್ಷಗಳು ಅಂತ್ಯವಾಗಲಿದೆ ಎಂದಿದ್ದರು. ಆದರೂ ಜನರನ್ನು ಹತ್ಯೆ ಮಾಡಲಾಗುತ್ತಿದೆ ಏಕೆ? ಭದ್ರತಾ ಪಡೆ ಏನು ಮಾಡುತ್ತಿದೆ? ಅಪರಾಧಿಗಳನ್ನು ಬಂಧಿಸದಿದ್ದರೆ, ಹಲ್ಲೆಗಳನ್ನು ತಡೆಯದಿದ್ದರೆ ಕಾಶ್ಮೀರದಲ್ಲಿ ರಕ್ತಾಪಾತ ನಿಲ್ಲುವುದಿಲ್ಲ' ಎಂದು ಮುಫ್ತಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಶ್ರೀಲಂಕಾ ಮೂಲದ ವ್ಯಕ್ತಿಯೊಬ್ಬರನ್ನು ಗುಂಪು ಹಲ್ಲೆ ಮೂಲಕ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಕೋರ್ಟ್ ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದೆ. 12 ಮಂದಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.