ADVERTISEMENT

ರಾವತ್‌ ದಂಪತಿಯ ಮದುವೆಯ ಕ್ಷಣವನ್ನು ನೋವಿನಿಂದ ನೆನಪಿಸಿಕೊಂಡ ಮಧುಲಿಕಾ ಸೋದರ

ಪಿಟಿಐ
Published 11 ಡಿಸೆಂಬರ್ 2021, 2:24 IST
Last Updated 11 ಡಿಸೆಂಬರ್ 2021, 2:24 IST
ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಮತ್ತು ಪತ್ನಿ ಮಧುಲಿಕಾ
ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಮತ್ತು ಪತ್ನಿ ಮಧುಲಿಕಾ    

ನವದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಅವರಿಗೆ ಇಡೀ ರಾಷ್ಟ್ರ ಅಂತಿಮ ವಿದಾಯ ಹೇಳಿದೆ. ಇದೇ ಸಂದರ್ಭದಲ್ಲೇ ಮಧುಲಿಕಾ ಅವರ ತಮ್ಮ ಯಶ್‌ವರ್ಧನ್‌ ಸಿಂಗ್‌ ಅವರು ರಾವತ್‌ ದಂಪತಿಯ ವೈವಾಹಿಕ ಮೈತ್ರಿಯ ಘಟನಾವಳಿಗಳನ್ನು ದುಃಖದಿಂದಲೇ ನೆನಪಿಸಿಕೊಂಡಿದ್ದಾರೆ.

ಅವರಿಬ್ಬರನ್ನು ವಿಧಿಯೇ ಒಂದು ಮಾಡಿತ್ತು. ವಿಧಿ ಅವರಿಬ್ಬರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿದೆ ಎಂದು ಯಶ್‌ ಬೇಸರದಿಂದ ನುಡಿದಿದ್ದಾರೆ.


‘ಸೇನಾ ಅಧಿಕಾರಿಯಾಗಿದ್ದ ರಾವತ್‌ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ತಮ್ಮ ಮಗ ಬಿಪಿನ್ ರಾವತ್‌ಗಾಗಿ ನನ್ನ ಅಕ್ಕನನ್ನು ಕೋರಿದ್ದರು. ಲಕ್ಷ್ಮಣ್‌ ಸಿಂಗ್‌ ಅವರು ನನ್ನ ತಂದೆ ಮೃಗೇಂದ್ರ ಸಿಂಗ್ ಅವರಿಗೆ ಪತ್ರ ಬರೆದು, ಮದುವೆ ಮಾತುಕತೆಗಳನ್ನು ಆರಂಭಿಸಿದ್ದರು,’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ADVERTISEMENT

'ನಮ್ಮ 'ನಾನಾಜಿ' ಲಖನೌದಲ್ಲಿ ವಾಸಿಸುತ್ತಿದ್ದರು. ಅಲ್ಲಿಯೇ ನನ್ನ ಸಹೋದರಿ 1960ರ ದಶಕದಲ್ಲಿ ಹುಟ್ಟಿದ್ದಳು. ಆಕೆ ಹುಟ್ಟಿದ ಸ್ಥಳದ ವಿಳಾಸ ನಂ. 25, ಅಶೋಕ ಮಾರ್ಗ'. ಆಕೆ ವಿವಾಹವಾದ ಸ್ಥಳದ ವಿಳಾಸ ನಂ. 25, ಅಶೋಕ ರಸ್ತೆ, ದೆಹಲಿ. ಇದೊಂದು ಕಾಕತಾಳೀಯ,’ ಎಂದು ಅವರು ಪಿಟಿಐಗೆ ತಿಳಿಸಿದರು.

‘ 1986ರಲ್ಲಿ ಅವರಿಬ್ಬರು ಮದುವೆಯಾಗಿದ್ದರು. ಆಗ ರಾವತ್‌ ಅವರು ಸೇನೆಯಲ್ಲಿ ಕ್ಯಾಪ್ಟನ್‌ ಆಗಿದ್ದರು. ಅದೊಂದು ಮಧುರ ಗಳಿಗೆ. ಆದರೆ, ಈಗ ನೋಡಿ. ಕ್ರೂರ ವಿಧಿ ಅವರಿಬ್ಬರನ್ನು ನಮ್ಮಿಂದ ಕಿತ್ತುಕೊಂಡು ಹೋಗಿದೆ,’ ಎಂದು ಅವರು ಅತ್ಯಂತ ದುಃಖದಿಂದ ನುಡಿದರು.

ಬಿಪಿನ್‌ ರಾವತ್‌ ಮತ್ತು ಮಧುಲಿಕಾ ದಂಪತಿಗೆ ತಾರಿಣಿ ಮತ್ತು ಕೃತಿಕಾ ಎಂಬ ಹೆಸರಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾದ ಬಿಪಿನ್‌ ರಾವತ್‌ ಅವರು ಡಿಸೆಂಬರ್ 1978 ರಲ್ಲಿ ಭಾರತೀಯ ಸೇನೆಯ 11 ನೇ ಗೂರ್ಖಾ ರೈಫಲ್ಸ್‌ಗೆ ಸೇರ್ಪಡೆಯಾಗಿದ್ದರು.

ಜನರಲ್ ರಾವತ್ ಅವರು 2016 ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 2019ರಲ್ಲಿ ಸೇನೆಗಳ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಪತನ ಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌ (63), ಅವರ ಪತ್ನಿ ಮಧುಲಿಕಾ, ಏಳುಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.