ADVERTISEMENT

‘ಬುದ್ನಿಯಲ್ಲಿ ಚೌಹಾಣ್‌ರನ್ನು ಸೋಲಿಸಲಾಗದು’

ಆನಂದ್ ಮಿಶ್ರಾ
Published 22 ನವೆಂಬರ್ 2018, 19:40 IST
Last Updated 22 ನವೆಂಬರ್ 2018, 19:40 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ಬುದ್ನಿ: ಇದೊಂದು ವಿಚಿತ್ರ ವಿರೋಧಾಭಾಸ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪ್ರತಿನಿಧಿಸುತ್ತಿರುವ ಬುದ್ನಿ ಕ್ಷೇತ್ರವನ್ನು ಮಹಾನಗರಗಳಾದ ಮುಂಬೈ ಮತ್ತು ದೆಹಲಿಯ ಜತೆ ಸಂಪರ್ಕಿಸುವ ರೈಲು ಮಾರ್ಗ ಊರಿನ ಜನರನ್ನು ಎರಡಾಗಿ ವಿಭಜಿಸಿದೆ. ರೈಲು ಮಾರ್ಗವನ್ನು ದಾಟಲು ಒಂದು ಕೆಳಸೇತುವೆ ನಿರ್ಮಿಸಿಕೊಡಿ ಎಂದು ಕ್ಷೇತ್ರದ ಜನರು ಎರಡು ದಶಕಗಳಿಂದ ಆಗ್ರಹಿಸುತ್ತಿದ್ದಾರೆ.

ಅಮೃತಸರದಲ್ಲಿ ದಸರಾ ರಾವಣ ವಧೆ ಸಂದರ್ಭದಲ್ಲಿ ಚಲಿಸುತ್ತಿರುವ ರೈಲಿಗೆ ಸಿಕ್ಕಿ ಜನರು ಮೃತಪಟ್ಟ ದುರಂತವನ್ನು ಉಲ್ಲೇಖಿಸಿ, ಇಲ್ಲಿಯೂ ಅಂತಹುದೊಂದು ದುರಂತ ಕಾದಿದೆ ಎಂದು ಗ್ರಾಮಸ್ಥರು ಭೀತಿ ವ್ಯಕ್ತಪಡಿಸುತ್ತಾರೆ. ಬುದ್ನಿಯ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಈಚೆಯಿಂದ ಆಚೆಗೆ, ಆಚೆಯಿಂದ ಈಚೆಗೆ ರೈಲು ಹಳಿ ದಾಟಿ ಬರುವುದು ಸಾಮಾನ್ಯ.

‘ಬುದ್ನಿಯಿಂದ ಪಕ್ಕದ ಮನಕ್ಕೆ ಹೋಗಲು ರಸ್ತೆ ಮಾರ್ಗವಿದೆ. ಹೋಷಂಗಾಬಾದ್‌ ಮೂಲಕ ಹಾದು ಹೋಗಬೇಕಿದ್ದರೆ ಹತ್ತು ಕಿ.ಮೀ. ಸಂಚರಿಸಬೇಕು. ಜನರು ಐನೂರು ಮೀಟರ್‌ ನಡೆದು ರೈಲು ಹಳಿ ದಾಟಿಯೇ ಆಚೀಚೆಗೆ ಹೋಗುತ್ತಾರೆ. ಬೆಳಗ್ಗಿನ ಹೊತ್ತು ಮಕ್ಕಳು ಗುಂಪು ಗುಂಪಾಗಿ ರೈಲು ಹಳಿ ದಾಟುತ್ತಾರೆ. ಈ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಖ್ಯೆಯೇನೂ ಕಡಿಮೆ ಅಲ್ಲ. ಈ ಸ್ಥಳವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಲೋಕಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪ್ರತಿನಿಧಿಸುತ್ತಿದ್ದಾರೆ. ಹಾಗಿದ್ದರೂ ಇಷ್ಟೊಂದು ಸಣ್ಣ ಬೇಡಿಕೆ ಈಡೇರಿಲ್ಲ’ ಎಂದು ಸ್ಥಳೀಯ ವ್ಯಕ್ತಿ ಸುರ್ಜೀತ್‌ ರಜಪೂತ್‌ ಹೇಳುತ್ತಾರೆ.

ADVERTISEMENT

ಬುದ್ನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಎಕ್ಸ್‌ ರೇ ಯಂತ್ರ ಕೂಡ ಇಲ್ಲ. ಈ ಕ್ಷೇತ್ರದಲ್ಲಿ ಹಲವು ಕಾರ್ಖಾನೆಗಳಿವೆ. ಆದರೆ, ಸ್ಥಳೀಯರಿಗೆ ಕೆಲಸ ದೊರಕುತ್ತಿಲ್ಲ. ಬುದ್ನಿಯ ಜನರಲ್ಲಿ ಹಲವು ದೂರುಗಳಿವೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಲು ಅವರಿಗೆ ಯಾವ ಹಿಂಜರಿಕೆಯೂ ಇಲ್ಲ.

ಹಾಗಿದ್ದರೂ ‘ಚೌಹಾಣ್‌ ಅವರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಯಾಕೆ ಸಾಧ್ಯವಿಲ್ಲ?’ ಉತ್ತರ ತಟ್ಟನೆ ಬರುತ್ತದೆ... ‘ನಮಗೆ ದಿನದ 24 ತಾಸೂ ವಿದ್ಯುತ್‌ ಪೂರೈಕೆ ಇದೆ, ರಸ್ತೆಗಳು ಅಗಲವಾಗಿವೆ, ಸ್ವಚ್ಛವಾಗಿವೆ ಮತ್ತು ಚೆನ್ನಾಗಿವೆ. ಅದಷ್ಟೇ ಅಲ್ಲದೆ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಿದ್ದೇವೆ ಎಂಬ ಸಂತೋಷವೂ ನಮಗೆ ಇದೆ. ಕಳೆದ ವರ್ಷ ಮುಖ್ಯಮಂತ್ರಿ ಮನೆಗೆನಾವು ಹೋಗಿದ್ದೆವು. ರಾಜ್ಯದ ಇತರ ಎಲ್ಲ ಕ್ಷೇತ್ರಗಳ ಜನರು ಶಾಸಕರನ್ನು ಆಯ್ಕೆ ಮಾಡುವಾಗ ನಾವು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸೌಭಾಗ್ಯ ಪಡೆದಿದ್ದೇವೆ’ ಎನ್ನುತ್ತಾರೆ ಬುದ್ನಿ ಗ್ರಾಮದ ಯುವಕ ವಿಕಾಸ್‌ ಪಾಂಡೆ.

‘ಚೌಹಾಣ್‌ ಅಲ್ಲದೆ ಬೇರೆ ಯಾರನ್ನೇ ಇಲ್ಲಿ ಬಿಜೆಪಿ ಕಣಕ್ಕಿಳಿಸಿದರೂ ಸೋಲು ಖಂಡಿತ’ ಎಂಬುದು ಇನ್ನೊಬ್ಬ ಯುವಕ ದೀಪಕ್‌ ಅವರ ಖಚಿತ ನುಡಿ.

ಈ ವಿಐಪಿ ಕ್ಷೇತ್ರದಲ್ಲಿ ಕಂಡು ಬರುವ ಅತೃಪ್ತಿ ಮಧ್ಯ ಪ್ರದೇಶದ ಉದ್ದಗಲಕ್ಕೂ ಇದ್ದಂತಿದೆ. ಚೌಹಾಣ್‌ ಅವರ ಬಗ್ಗೆ ಅಂತಹ ವಿರೋಧ ಏನಿಲ್ಲದಿದ್ದರೂ ಬಿಜೆಪಿಯ 15 ವರ್ಷಗಳ ಆಳ್ವಿಕೆಯ ಬಗ್ಗೆ ಜನರಲ್ಲಿ ದಣಿವು ಕಾಣಿಸುತ್ತಿದೆ.

ಜನರ ಮನೋಭಾವದಲ್ಲಿ ಬದಲಾವಣೆ ಆಗುತ್ತಿದೆ ಎಂಬುದು ಚೌಹಾಣ್‌ ಅವರಿಗೆ ತಿಳಿದಿಲ್ಲ ಎಂದಲ್ಲ. ಹಾಗಾಗಿಯೇ ಅವರು ಈ ಬಾರಿ ಬುದ್ನಿಯಲ್ಲಿ ಪ್ರಚಾರಕ್ಕೇ ಹೋಗಿಲ್ಲ ಎಂದು ಹೇಳಲಾಗುತ್ತಿದೆ. ಅವರ ಹೆಂಡತಿ ಸಾಧನಾ ಸಿಂಗ್‌ ಮತ್ತು ಮಗ ಕಾರ್ತಿಕೇಯ್‌ ಮನೆಮನೆ ಪ್ರಚಾರ ನಡೆಸುತ್ತಿದ್ದಾರೆ. ಗ್ರಾಮಸ್ಥರ ಸಿಟ್ಟಿಗೆ ಈ ಇಬ್ಬರೂ ಗುರಿಯಾಗುತ್ತಿದ್ದಾರೆ.

ಕೇಂದ್ರದ ಮಾಜಿ ಸಚಿವ ಅರುಣ್‌ ಯಾದವ್‌ ಅವರು ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ. ಚುನಾವಣೆ ಬಳಿಕ ತಮ್ಮ ಸ್ಥಿತಿ ಏನು ಎಂಬುದರ ಅರಿವು ಅವರಿಗೆ ಇದೆ. ಮತ ಕೇಳಲು ಹೋದ ಯಾದವ್‌ ಅವರು ಜನರ ಆಕ್ರೋಶದಿಂದಾಗಿ ಹಿಂದಕ್ಕೆ ಬಂದ ವಿಡಿಯೊ ವೈರಲ್‌ ಆಗಿದೆ. ಕಾಂಗ್ರೆಸ್‌ಗೆ ಯಾಕೆ ಮತ ಹಾಕಬೇಕು ಎಂದು ಜನರು ಮತ್ತೆ ಮತ್ತೆ ಕೇಳುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇವೆ.

ಚೌಹಾಣ್‌ ಅವರನ್ನು ಈ ಕ್ಷೇತ್ರದಲ್ಲಿ ಸೋಲಿಸುವುದು ಸಾಧ್ಯವಿಲ್ಲ. ಆದರೆ, ಈ ಬಾರಿ ಅವರ ಗೆಲುವಿನ ಅಂತರ ಕಡಿಮೆ ಆಗಬಹುದು ಎಂದು ಕ್ಷೇತ್ರದ ಹಲವರು ಹೇಳುತ್ತಿದ್ದಾರೆ.‌

ಮತದಾರರಿಗೆ ಪತ್ರ
‘ಈ ಚುನಾವಣಾ ಹೋರಾಟದಲ್ಲಿ ನೀವೆಲ್ಲರೂ ಶಿವರಾಜ್‌ ಆಗಬೇಕು. ಮಧ್ಯ ಪ್ರದೇಶದ ಇತರ 229 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನು ಖಾತರಿಪಡಿಸುವ ಹೊಣೆ ನನಗಿದೆ. ಹಾಗಾಗಿ ದಾಖಲೆ ಅಂತರದಲ್ಲಿ ನಾನು ಗೆಲ್ಲುವಂತೆ ನೀವು ನೋಡಿಕೊಳ್ಳಬೇಕು. ನಾನು ಒಬ್ಬ ಶಾಸಕನಾಗಿ ಈ ಕ್ಷೇತ್ರದ ಕೆಲಸ ಮಾಡಿದ್ದಲ್ಲ, ಬದಲಾಗಿ ಒಬ್ಬ ಮಗ, ಅಣ್ಣ, ಅಥವಾ ಮಾವ ಆಗಿ ನೋಡಿಕೊಂಡಿದ್ದೇನೆ’ ಎಂಬ ಪತ್ರವನ್ನು ಕ್ಷೇತ್ರದ ಮತದಾರರಿಗೆ ಚೌಹಾಣ್‌ ಬರೆದಿದ್ದಾರೆ.

*
ಸಾಧನಾ ಸಿಂಗ್‌ ಮತ್ತು ಕಾರ್ತಿಕೇಯ ಮೊದಲ ಬಾರಿಗೆ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಗೆಲುವಿನ ಅಂತರವನ್ನು ಒಂದು ಲಕ್ಷಕ್ಕೆ ಏರಿಸುತ್ತೇವೆ. ಶಿವರಾಜ್‌ ಬರುವ ಮೊದಲು ಬುದ್ನಿಯಲ್ಲಿ ಏನಿತ್ತು?
–ರಾಜೇಂದ್ರ ಸಿಂಗ್‌, ಚೌಹಾಣ್‌ ಪರವಾಗಿ ಕ್ಷೇತ್ರ ನೋಡಿಕೊಳ್ಳುತ್ತಿರುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.