ADVERTISEMENT

ಚಂಬಲ್‌ನ ಡಕಾಯಿತರ ಮತ ಬೇಟೆ

ಆನಂದ್ ಮಿಶ್ರಾ
Published 26 ನವೆಂಬರ್ 2018, 20:18 IST
Last Updated 26 ನವೆಂಬರ್ 2018, 20:18 IST
ಮಲ್ಖನ್‌ ಸಿಂಗ್‌
ಮಲ್ಖನ್‌ ಸಿಂಗ್‌   

‌ಭಿಂಡ್‌: ಬಂದೂಕಿನ ಮೊರೆತಕ್ಕೆ ಇಲ್ಲಿ ಕಾರಣವೇ ಬೇಕಿಲ್ಲ. ಬಂದೂಕನ್ನು ಇಟ್ಟುಕೊಳ್ಳುವುದು ಇಲ್ಲಿ ಸಾಮಾಜಿಕ ಅಂತಸ್ತಿನ ಸಂಕೇತ ಎಂದೇ ಜನರು ಭಾವಿಸುತ್ತಾರೆ. ಭಿಂಡ್‌ ಮತ್ತು ಮೊರೆನಾದ ಕಂದರಗಳಿಗೆ ನಿಮಗೆ ಸ್ವಾಗತ. ಮಧ್ಯ ಪ್ರದೇಶದ ಚಂಬಲ್‌ ಪ್ರದೇಶದಲ್ಲಿರುವ ಪರವಾನಗಿ ಇರುವ ಒಟ್ಟು ಬಂದೂಕುಗಳ ಪೈಕಿ ಮೂರನೇ ಎರಡಷ್ಟು ಈ ಊರುಗಳಲ್ಲಿಯೇ ಇವೆ.

ತೀರಾ ಇತ್ತೀಚೆಗೆ, ಇರ್ಫಾನ್‌ ಖಾನ್‌ ತಾರಾಗಣದಲ್ಲಿರುವ ‘ಪಾನ್‌ ಸಿಂಗ್ ತೋಮರ್‌’ ಸೇರಿ ಬಾಲಿವುಡ್‌ನ ಹತ್ತಾರು ಸಿನಿಮಾಗಳಿಗೆ ಚಂಬಲ್‌ ಕಣಿವೆ ಕತೆ ಕೊಟ್ಟಿದೆ. ಹಿಂದೂ ದೇವಾಲಯ ವಾಸ್ತುಶಿಲ್ಪದ ಅತ್ಯುತ್ತಮ ರಚನೆಗಳನ್ನು ಇಲ್ಲಿ ಕಾಣಬಹುದು. ಆದರೆ, ಡಕಾಯಿತಿಯ ಜತೆಗಷ್ಟೇ ಚಂಬಲ್‌ ಕಣಿವೆಯನ್ನು ಹೋಲಿಸುವುದರಿಂದ ವಾಸ್ತುಶಿಲ್ಪದ ಬಗ್ಗೆ ಗೊತ್ತಿರುವವರು ಬಹಳ ಕಡಿಮೆ ಜನ.

ಗ್ವಾಲಿಯರ್‌–ಚಂಬಲ್‌ ಪ್ರದೇಶದಲ್ಲಿ 34 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿನ ಜಾತಿ ಲೆಕ್ಕಾಚಾರ ಸಂಕೀರ್ಣವಾದರೆ, ಹಿಂಸೆಯ ಇತಿಹಾಸ ಭೀಕರ. ಭಿಂಡ್‌ ಮತ್ತು ಮೊರೆನಾದಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸುತ್ತಿದ್ದ ಡಕಾಯಿತರಾದ ಮಲ್ಖನ್‌ ಸಿಂಗ್‌ ಮತ್ತು ಮೊಹರ್‌ ಸಿಂಗ್‌ ಅವರ ಬಗ್ಗೆ ಜನರಲ್ಲಿ ಈಗಲೂ ಭಯ ಇದೆ. ಪ್ರತಿ ಚುನಾವಣೆಯಲ್ಲಿಯೂ ಇವರಿಗೆ ಬಹಳ ಬೇಡಿಕೆಯೂ ಇದೆ.

ADVERTISEMENT

ಈ ಬಾರಿಯ ಚುನಾವಣೆಯಲ್ಲಿ ಇವರೇನು ಮಾಡುತ್ತಿದ್ದಾರೆ?

ಮಲ್ಖನ್‌ಗೆ ಈಗ 74 ವರ್ಷ. ಅವರನ್ನು ದಾದಾ ಎಂದು ಕರೆಯುತ್ತಾರೆ. 91 ವರ್ಷದ ಮೊಹರ್‌ ಅವರನ್ನು ಬಾಬಾ ಎಂದೇ ಗುರುತಿಸುತ್ತಾರೆ. ಒಂದು ಕಾಲದಲ್ಲಿ ಇವರಿಬ್ಬರೂ ಜತೆಗಿದ್ದರು. ಈಗ, ಭಿನ್ನ ರಾಜಕೀಯ ಪಕ್ಷಗಳ ಬೆನ್ನಿಗೆ ನಿಂತಿದ್ದಾರೆ.

ವಯಸ್ಸಿನಿಂದಾಗಿ ಮೊಹರ್‌ ಸಿಂಗ್‌ ಹಣ್ಣಾಗಿದ್ದಾರೆ. ಮಲ್ಖನ್‌ ಸಿಂಗ್‌ ಗತ್ತಿಗೆ ಯಾವ ಕುಂದೂ ಬಂದಿಲ್ಲ. ಗ್ವಾಲಿಯರ್‌ನ ಸದಾಶಿವ ನಗರ ಲಷ್ಕರ್‌ನಲ್ಲಿರುವ ಬಿ–15 ಸಂಖ್ಯೆಯ ಮಲ್ಖನ್‌ ನಿವಾಸಕ್ಕೆ ಜನರು ಸಾಲುಗಟ್ಟಿ ಬರುತ್ತಾರೆ. ಪ್ರತಿ ಬೆಳಿಗ್ಗೆಯೂ ಅದೇ ಕೆಂಪು ತಿಲಕ ಇಟ್ಟು ಮಲ್ಖನ್‌ ಹೊರಗೆ ಬಂದರೆ ಅದೇ ಹಳೆಯ ‘ಡಾಕು’ ಚಿತ್ರ ಕಣ್ಣ ಮುಂದೆ ಬರುತ್ತದೆ. ಮಲ್ಖನ್‌ ಮೇಲೆಯೇ ಹಲವು ಸಿನಿಮಾಗಳು ಬಂದಿವೆ. ಅವರು ಇಂದಿನವರೆಗೆ ಒಂದು ಚುನಾವಣೆಯಲ್ಲಿಯೂ ಸ್ಪರ್ಧಿಸಿಲ್ಲ.

24 ವರ್ಷಗಳಿಂದ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಅವರಿಗೆ ಈ ಬಾರಿ 8–10 ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಇದೆ. ಕ್ಷೇತ್ರದಿಂದ ಕ್ಷೇತ್ರಕ್ಕೆ ಸುತ್ತಾಡುತ್ತಿರುವಾಗಲೂ ಮಲ್ಖನ್‌ ಮೊಬೈಲ್‌ ಫೋನ್‌ಗೆ ಬಿಡುವೆಂಬುದೇ ಇಲ್ಲ.

ಕಳೆದ ಚುನಾವಣೆವರೆಗೆ ಕಾಂಗ್ರೆಸ್‌ ಪರವಾಗಿ ಮೊಹರ್‌ ಸಿಂಗ್‌ ಪ್ರಚಾರ ಮಾಡಿದ್ದರು. ‘ಈ ಬಾರಿ ಬದಲಾವಣೆ ಖಚಿತ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅನಿವಾರ್ಯ. ಇಲ್ಲವಾದರೆ, ಬಿಜೆಪಿ ಎಲ್ಲವನ್ನೂ ನಾಶ ಮಾಡಲಿದೆ’ ಎಂಬುದು ಅವರ ಅಭಿಪ್ರಾಯ.

ಮೊಹರ್‌ ಸಿಂಗ್‌ ಈಗ ಸಾಗುವಳಿದಾರ. ಭಿಂಡ್‌ನ ಮೆಹಗಾಂವ್‌ನಲ್ಲಿ ವಿಸ್ತಾರವಾದ ಜಮೀನು ಇದೆ. ಎರಡು ಬಾರಿ ಮೆಹಗಾಂವ್‌ ಪುರಸಭೆಯ ಸದಸ್ಯರಾಗಿಯೂ ಅವರು ಆಯ್ಕೆಯಾಗಿದ್ದರು.

ಚಂಬಲ್‌ ಕಣಿವೆಯಲ್ಲಿ ಭಯಾನಕ ವಾತಾವರಣ ಸೃಷ್ಟಿಸಲು ತಮಗಾದ ಅನ್ಯಾಯವೇ ಕಾರಣ ಎಂದು ಮೊಹರ್‌ ಮತ್ತು ಮಲ್ಖನ್‌ ಇಬ್ಬರೂ ಹೇಳುತ್ತಾರೆ. ಮೊಹರ್‌ 1972ರಲ್ಲಿಯೇ ಶರಣಾದರೆ, ಮಲ್ಖನ್‌ 1982ರಲ್ಲಿ ಶರಣಾದರು. ‘ಬಂದೂಕಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ’ ಎಂಬುದು ಈಗ ಅವರಿಗೆ ಮನವರಿಕೆಯಾಗಿದೆ.

***
‘ಬಿಟ್ಟಿರಲಾಗದ ಬಂದೂಕು ಬಂಧ’
ಹಿಂಸೆಯ ನೆನಪುಗಳು ಇನ್ನೂ ಮಾಸದಿರುವ ಇಲ್ಲಿನ ಕಣಿವೆಯ ಜನರಿಗೆ ಬಂದೂಕಿನ ಮೇಲೆ ಅದೇನೋ ಮೋಹ. ಇಲ್ಲಿ ಬಂದೂಕು ಇಲ್ಲದವರು ಕಡಿಮೆ. ಭಿಂಡ್‌, ಮೊರೆನಾ ಮತ್ತು ಗ್ವಾಲಿಯರ್‌ ಪ್ರದೇಶದಲ್ಲಿ ಇರುವ ಬಂದೂಕುಗಳ ಸಂಖ್ಯೆ 80 ಸಾವಿರಕ್ಕೂ ಹೆಚ್ಚು. ಚುನಾವಣೆಯ ಸಮಯದಲ್ಲಿ ಅವೆಲ್ಲವನ್ನೂ ಪೊಲೀಸ್‌ ಠಾಣೆಗೆ ಒಪ್ಪಿಸಬೇಕು ಎಂಬುದು ನಿಯಮ. ಇವುಗಳನ್ನು ಸಂಗ್ರಹಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಮೆಹಗಾಂವ್‌ ಪೊಲೀಸ್‌ ಠಾಣೆಯೊಂದರಲ್ಲಿಯೇ 1900ಕ್ಕೂ ಹೆಚ್ಚು ಬಂದೂಕುಗಳು ಸಂಗ್ರಹವಾಗಿದೆ ಎಂದು ಠಾಣಾಧಿಕಾರಿ ಸಂಜೀತ್‌ ಸಿಂಗ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಂದೂಕು ಹೊಂದಿರುವುದು ಚಂಬಲ್‌ನಲ್ಲಿ ಪ್ರತಿಷ್ಠೆಯ ಪ್ರಶ್ನೆ. ಇದು ಯಾವುದೋ ಒಂದು ಜಾತಿಗೆ ಸೀಮಿತವೇನೂ ಅಲ್ಲ, ಗುರ್ಜರ್‌, ಬ್ರಾಹ್ಮಣ, ಪರಿಶಿಷ್ಟ ಜಾತಿ ಎಲ್ಲರಲ್ಲಿಯೂ ಬಂದೂಕು ಪ್ರೇಮ ಒಂದೇ ತೆರನಾಗಿದೆ’ ಎಂದು ಸಂಜೀತ್‌ ವಿವರಿಸುತ್ತಾರೆ.

ಸಭೆ, ಸಮಾರಂಭಗಳಲ್ಲಿ ಬಂದೂಕಿನಿಂದ ಗುಂಡು ಹಾರಿಸುವುದಕ್ಕೆ ನಿಷೇಧ ಇದೆ. ಬಂದೂಕು ಬಳಸಿದಾಗ ಗುರಿ ತಪ್ಪಿ ಅಮಾಯಕರು ಬಲಿಯಾಗಿರುವ ಹಲವು ಘಟನೆಗಳು ಹಸಿ ಹಸಿಯಾಗಿಯೇ ಇವೆ. ಹಾಗಿದ್ದರೂ ಬಂದೂಕಿನ ಮೊರೆತ ಇಲ್ಲದೆ ಒಂದು ಮದುವೆಯೂ ಇಲ್ಲಿ ನಡೆಯುವುದಿಲ್ಲ.

ಮೊಹರ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.