ADVERTISEMENT

29 ಮರಿಗಳಿಗೆ ಜನ್ಮ ನೀಡಿ ‘ಸೂಪರ್ ಮಾಮ್’ ಆಗಿದ್ದ ಹುಲಿ ಸಾವು: ಅಂತಿಮ ವಿದಾಯ

ಪಿಟಿಐ
Published 17 ಜನವರಿ 2022, 8:56 IST
Last Updated 17 ಜನವರಿ 2022, 8:56 IST
ಕಾಲರ್‌ವಾಲಿ ಹುಲಿ ಹಾಗೂ ಅದರ ಅಂತ್ಯಕ್ರಿಯೆ, ಚಿತ್ರ–ಪಿಟಿಐ
ಕಾಲರ್‌ವಾಲಿ ಹುಲಿ ಹಾಗೂ ಅದರ ಅಂತ್ಯಕ್ರಿಯೆ, ಚಿತ್ರ–ಪಿಟಿಐ   

ಶಿವನಿ (ಮಧ್ಯಪ್ರದೇಶ): 29 ಮರಿಗಳಿಗೆ ಜನ್ಮ ನೀಡಿ ‘ಸೂಪರ್ ಮಾಮ್’ ಎಂದು ಖ್ಯಾತಿಯಾಗಿದ್ದ ಮಧ್ಯಪ್ರದೇಶದ ಪೆಂಚ್ ನ್ಯಾಷನಲ್ ಪಾರ್ಕ್‌ನ ಹುಲಿಯೊಂದು ವಯೋ ಸಹಜ ಕಾಯಿಲೆಯಿಂದ ಅಸುನೀಗಿದೆ.

ಈ ಸುದ್ದಿಯನ್ನು ಪಾರ್ಕ್ ಅಧಿಕಾರಿಗಳು ಖಚಿತಪಡಿಸಿದ್ದು, ‘ಕಾಲರ್‌ವಾಲಿ’ ಎಂದು ಹೆಸರಿಸಲಾಗಿದ್ದ ಟಿ15 ಎಂಬ 17 ವರ್ಷದ ಹೆಣ್ಣು ಹುಲಿ ಶನಿವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿದೆ. ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಪಾರ್ಕ್‌ ಸಿಬ್ಬಂದಿ ನಿಯಮಗಳಂತೆ ಹುಲಿಯ ಅಂತ್ಯಕ್ರಿಯೆ ನಡೆಸಿದ್ದಾರೆ.

ಕಾಲರ್‌ವಾಲಿ 2008 ರಿಂದ 2018 ರ ಅವಧಿಯಲ್ಲಿ ಒಟ್ಟು 29 ಮರಿಗಳಿಗೆ ಜನ್ಮ ನೀಡಿ ‘ಸೂಪರ್ ಮಾಮ್’ ಎಂದು ಬಿರುದು ಪಡೆದಿತ್ತು.

ADVERTISEMENT

2008 ನವೆಂಬರ್‌ನಲ್ಲಿ ಕಾಲರ್‌ವಾಲಿ ಮೊದಲು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಕಳೆದ ಒಂದು ವಾರದಿಂದ ಅದರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಪಾರ್ಕ್ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಆದರೆ, ವಯೋಸಹಜವಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂಪರ್ ಮಾಮ್ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತಾಪ ಸೂಚಿಸಿದ್ದು, ‘ಕಾಲರ್‌ವಾಲಿ ಸೂಪರ್ ಮಾಮ್ ಮಧ್ಯಪ್ರದೇಶದ ಹೆಮ್ಮೆಯಾಗಿತ್ತು’ ಎಂದು ಸ್ಮರಿಸಿದ್ದಾರೆ.

ಮಧ್ಯಪ್ರದೇಶದಲ್ಲೂ ಹೆಚ್ಚಾಗಿ ಹುಲಿಗಳು ಕಂಡು ಬರುತ್ತಿದ್ದು, ಅಲ್ಲಿನ ಅರಣ್ಯ ಇಲಾಖೆ ಮಾಹಿತಿ ಪ್ರಕಾರ 526 ಹುಲಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.