ADVERTISEMENT

ಮಧ್ಯಪ್ರದೇಶ: ಕೋವಿಡ್‌ ಬಾಧಿತ ಕುಟುಂಬಕ್ಕೆ ಮಾಸಿಕ ₹5000, ಮಕ್ಕಳಿಗೆ ಉಚಿತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 13 ಮೇ 2021, 11:01 IST
Last Updated 13 ಮೇ 2021, 11:01 IST
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ (ಪಿಟಿಐ)
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ (ಪಿಟಿಐ)   

ನವದೆಹಲಿ: ‘ಕೋವಿಡ್‌ನಿಂದ ಬಾಧಿತವಾಗಿರುವ ಕುಟುಂಬಗಳಿಗೆ ಮಾಸಿಕ ₹ 5 ಸಾವಿರ ನೆರವು ಹಾಗೂ ತಂದೆ–ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲಾಗುವುದು’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಗುರುವಾರ ಪ್ರಕಟಿಸಿದರು.

‘ಅಲ್ಲದೆ, ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು ಅತಂತ್ರವಾಗಿರುವ ಕುಟುಂಬಗಳಿಗೆ ಸ್ವಉದ್ಯೋಗ ಕೈಗೊಳ್ಳಲು ಬಡ್ಡಿರಹಿತವಾಗಿ ಸರ್ಕಾರ ಸಾಲ ಒದಗಿಸಲಾಗುವುದು. ತಂದೆ–ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ, ಆ ಕುಟುಂಬಗಳು ಅರ್ಹರಲ್ಲದಿದ್ದರೂ ಉಚಿತವಾಗಿ ಪಡಿತರ ನೀಡಲಾಗುತ್ತದೆ’ ಎಂದೂ ತಿಳಿಸಿದರು.

ಕೋವಿಡ್ ಸೋಂಕು ತಡೆಯಲು ಹೇರಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಬಡವರಿಗೆ ಅಗತ್ಯ ನೆರವು ಪ್ರಕಟಿಸಬೇಕು ಎಂಬ ಕಾಂಗ್ರೆಸ್ ಒತ್ತಾಯದ ಹಿಂದೆಯೇ ಸರ್ಕಾರದ ಈ ಘೋಷಣೆ ಹೊರಬಿದ್ದಿದೆ.

ADVERTISEMENT

ಕೋವಿಡ್‌ ಸೋಂಕಿನಿಂದಾಗಿ ಹಲವು ಕುಟುಂಬಗಳು ತೀವ್ರವಾಗಿ ಬಾಧಿತವಾಗಿವೆ. ಮಕ್ಕಳು ತಂದೆ–ತಾಯಿ ಕಳೆದುಕೊಂಡಿದ್ದಾರೆ. ಆರೈಕೆದಾರರೇ ಮೃತಪಟ್ಟಿದ್ದರಿಂದ ವಯಸ್ಕರು ಏಕಾಂಗಿಯಾಗಿದ್ದಾರೆ. ಸಂಕಷ್ಟದಲ್ಲಿರುವ ಮಕ್ಕಳ ಕಾಳಜಿಯನ್ನು ಸರ್ಕಾರವೇ ವಹಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಧ್ಯಪ್ರದೇಶದಲ್ಲಿಯೂ ಸೋಂಕು ಪ್ರಮಾಣ ಹೆಚ್ಚಿದೆ. ಬುಧವಾರ 8,970 ಹೊಸ ಪ್ರಕರಣ ದಾಖಲಾಗಿದ್ದು, 84 ಮಂದಿ ಮೃತಪಟ್ಟಿದ್ದರು. ಸೋಂಕಿತರ ಸಂಖ್ಯೆ 7,00,202, ಮತ್ತು ಮೃತರ ಸಂಖ್ಯೆ 6,679ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.