ADVERTISEMENT

ಮಧ್ಯಪ್ರದೇಶ: ಪತ್ನಿ ಮೇಲೆ ಹಲ್ಲೆ ನಡೆಸಿದ ಎಡಿಜಿ, ವಿಡಿಯೊ ವೈರಲ್

ಏಜೆನ್ಸೀಸ್
Published 28 ಸೆಪ್ಟೆಂಬರ್ 2020, 10:36 IST
Last Updated 28 ಸೆಪ್ಟೆಂಬರ್ 2020, 10:36 IST
ಪುರುಷೋತ್ತಮ್ ಶರ್ಮಾ
ಪುರುಷೋತ್ತಮ್ ಶರ್ಮಾ   

ಭೋಪಾಲ್: ಮಧ್ಯಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಪುರುಷೋತ್ತಮ್ ಶರ್ಮಾ ಅವರುಪತ್ನಿಗೆ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತನ್ನ ಮನೆಯಲ್ಲಿ ಪತ್ನಿ ಮೇಲೆ ಶರ್ಮಾ ಹಲ್ಲೆ ನಡೆಸುತ್ತಿರುವಾಗ ಇಬ್ಬರು ವ್ಯಕ್ತಿಗಳು ಅದನ್ನು ತಡೆಯಲು ಯತ್ನಿಸುತ್ತಿರುವುದು ವಿಡಿಯೊದಲ್ಲಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಶರ್ಮಾ ಅವರನ್ನು ಮಧ್ಯಪ್ರದೇಶ ಸರ್ಕಾರ ಕೆಲಸದಿಂದ ವಜಾಗೊಳಿಸಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ನಾನು ಆಕೆಯ ಮೇಲೆ ದೌರ್ಜನ್ಯವೆಸಗಿದ್ದರೆ ಆಕೆ ದೂರು ನೀಡಬೇಕಿತ್ತು. ಇದು ಕೌಟುಂಬಿಕ ಕಲಹ, ಅಪರಾಧ ಅಲ್ಲ. ನಾನು ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿ ಅಥವಾ ಅಪರಾಧಿ ಅಲ್ಲ. ಈ ರೀತಿ ನಡೆದುಕೊಳ್ಳಬೇಕಾಗಿ ಬಂದಿದ್ದು ದುರದೃಷ್ಟರ.

ADVERTISEMENT

ನಮ್ಮ ದಾಂಪತ್ಯಕ್ಕೆ 32 ವರ್ಷ. 2008ರಲ್ಲಿ ಆಕೆ ನನ್ನ ವಿರುದ್ಧ ದೂರು ನೀಡಿದ್ದಳು. ಹೀಗಿದ್ದರೂ 2008ರಿಂದ ಇಲ್ಲಿವರೆಗೆ ಆಕೆ ನನ್ನ ಮನೆಯಲ್ಲಿಯೇ ಇದ್ದಾಳೆ. ಎಲ್ಲ ಸವಲತ್ತುಗಳನ್ನು ಬಳಸುತ್ತಾಳೆ ಮತ್ತು ನನ್ನದೇ ಖರ್ಚಿನಲ್ಲಿ ವಿದೇಶಕ್ಕೂ ಹೋಗುತ್ತಾಳೆ ಎಂದಿದ್ದಾರೆ.

ಶರ್ಮಾ ಅವರ ಕೃತ್ಯವನ್ನು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಖಂಡಿಸಿದ್ದಾರೆ.

ಮಹಿಳೆಯರು ಬರೀ ಸರಕುಗಳು ಎಂದು ಗಂಡಸರು ಭಾವಿಸಿದ್ದಾರೆ.ಜನರಿಗೆ ಪ್ರೇರಣೆಯಾಗಬೇಕಿದ್ದ ಉನ್ನತ ದರ್ಜೆಯ ಅಧಿಕಾರಿಯ ಈ ಕೃತ್ಯ ಖಂಡನೀಯ. ಗಂಡ ಮತ್ತು ಹೆಂಡತಿ ನಡುವೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಮಾತುಕತೆಯಿಂದ ಪರಿಹರಿಸಬೇಕು.ಈ ರೀತಿಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಕಾನ್ಪುರದಮಹಿಳಾ ಹಕ್ಕುಗಳ ಹೋರಾಟಗಾರ್ತಿ ವರ್ಷಾ ಮಿಶ್ರಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.