ADVERTISEMENT

ಲೆಕ್ಕ ಕೊಟ್ಟ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ!

ವಕೀಲರ ಸಂಘದ ಸದಸ್ಯರಿಗೆ ಪತ್ರ; ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಪರೂಪದ ಬೆಳವಣಿಗೆ

ಇ.ಟಿ.ಬಿ ಶಿವಪ್ರಿಯನ್‌
Published 1 ಜುಲೈ 2019, 20:00 IST
Last Updated 1 ಜುಲೈ 2019, 20:00 IST
ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್
ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್   

ಚೆನ್ನೈ: ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಪರೂಪ ಎನ್ನಬಹುದಾದ ಬೆಳವಣಿಗೆಯೊಂದರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌ ತಮ್ಮ ಎರಡು ವರ್ಷಗಳ ಕೆಲಸದ ಪ್ರಗತಿಯ ವಿವರಗಳನ್ನು ವಕೀಲರಿಗೆ ನೀಡಿದ್ದಾರೆ.

ಎರಡು ವರ್ಷಗಳ ಕಾರ್ಯಸಾಧನೆ ಪ್ರಗತಿಯನ್ನು ಕುರಿತು ವಕೀಲರ ಸಂಘದ ಸದಸ್ಯರುಗಳಿಗೆ ಪತ್ರವನ್ನು ಬರೆದಿದಿದ್ದಾರೆ. ಸಾಧನೆಗಳ ಜೊತೆಗೆ ವೈಫಲ್ಯಗಳನ್ನೂ ಪಟ್ಟಿ ಮಾಡಿದ್ದಾರೆ.

‘ನ್ಯಾಯಮೂರ್ತಿಯಾಗಿ ನಾಳೆ ನನ್ನ ಮೂರನೇ ವರ್ಷ ಆರಂಭವಾಗಲಿದೆ. ನಿಮ್ಮಿಂದ ನಾನು ಹೆಚ್ಚು ನಿರೀಕ್ಷೆ ಮಾಡುತ್ತಿದ್ದೇನೆ. ನಿಮ್ಮ ವಾದದ ಸರಣಿ ಪರಿಣಾಮಕಾರಿಯಾಗಿದ್ದರೆ ಉತ್ತಮ ತೀರ್ಪು ಬರುತ್ತದೆ. ಕೆಟ್ಟ ಅಥವಾ ಸಡಿಲವಾದ ವಾದವು ಕೆಟ್ಟದಾದ ತೀರ್ಪುಗಳಿಗೂ ಕಾರಣವಾಗಬಹುದು’ ಎಂದು ವಕೀಲರಿಗೆ ಕಿವಿಮಾತು ಹೇಳಿದ್ದಾರೆ.

ADVERTISEMENT

ಜೂನ್‌ 27ರಂದು ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಸ್ವಾಮಿನಾಥನ್‌ ಅವರು, ‘ಎರಡು ವರ್ಷದಲ್ಲಿ ಒಟ್ಟು 18,944 ಪ್ರಕರಣಗಳು, ವಿಭಿನ್ನ ಪೀಠಗಳ ಭಾಗವಾಗಿ 2,534 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ’ ಎಂದು ವಿವರಿಸಿದ್ದಾರೆ.

ನ್ಯಾಯಮೂರ್ತಿಯೊಬ್ಬರು ತಮ್ಮ ಕಾರ್ಯಸಾಧನೆಯ ವಿವರಗಳನ್ನು ನೀಡುತ್ತಿರುವುದು ಇದೇ ಮೊದಲು. ಜೂನ್‌ 28, 2017ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.

‘ನನ್ನ ಬಳಿಗೆ ಅನೇಕ ಪ್ರಕರಣಗಳು ಬಂದವು. ಪೂರ್ಣ ವಾದವನ್ನು ಆಲಿಸದೇ ತೀರ್ಪು ನೀಡುವುದು ಕಷ್ಟವಾಗುತ್ತಿತ್ತು. ಹಾಗೆಯೇ ಬಂದ ಎಲ್ಲ ಪ್ರಕರಣಗಳನ್ನು ಉಳಿಸಿಕೊಳ್ಳುವುದು ಸೂಕ್ತ ಎನಿಸುವುದಿಲ್ಲ. ಈ ಕಾರಣದಿಂದ ನೋವಿನಿಂದಲೇ ಎರಡು ವರ್ಷಗಳ ಅವಧಿಯಲ್ಲಿ 75 ಪ್ರಕರಣಗಳನ್ನು ಹಿಂದಿರುಗಿಸಿದ್ದೇನೆ’ ಎಂದು ವಿವರಿಸಿದ್ದಾರೆ.

ವಾಪಸು ಕಳುಹಿಸಿದ ವ್ಯಾಜ್ಯಗಳ ಅರ್ಜಿದಾರರಿಗೆ ಪತ್ರದಲ್ಲಿ ಕ್ಷಮೆಯನ್ನು ಕೋರಿರುವ ಅವರು, ‘ಬಹುತೇಕ ಎಲ್ಲ ತೀರ್ಪುಗಳನ್ನು ತೆರೆದ ನ್ಯಾಯಾಲಯದಲ್ಲಿಯೇ ಹೇಳಿ, ಬರೆಯಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಆತ್ಮಾವಲೋಕನ ಮಾಡಿಕೊಂಡರೆ ಇನ್ನೂ ಉತ್ತಮ ಕೆಲಸ ಸಾಧ್ಯವಿತ್ತೇ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಮನಃಸಾಕ್ಷಿ ಪ್ರಕಾರ ಉತ್ತರ, ‘ಹೌದು’. ಕೆಲವೊಮ್ಮೆ ತಾಳ್ಮೆ ತಪ್ಪಿದ್ದೇನೆ. ನಿಷ್ಠುರವಾಗಿ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

***

ವಕೀಲರು ಹೆಚ್ಚು ಸಹಕಾರ ನೀಡಬೇಕು. ಒಮ್ಮೆ ರೋಸ್ಟರ್‌ ಪಟ್ಟಿ ಪ್ರಕಟವಾದಂತೆಯೇ ತಮ್ಮ ಕಕ್ಷಿದಾರರನ್ನು ಸಂಪರ್ಕಿಸಲು ವಕೀಲರು ಸಿದ್ಧರಿರಬೇಕು. ದಾವೆ ಇತ್ಯರ್ಥಕ್ಕೆ ಒಮ್ಮೆ ಮುಂದೂಡುವುದಕ್ಕಿಂತಲೂ ಹೆಚ್ಚು ಸಮಯ ಬಯಸಬಾರದು
– ಜಿ.ಆರ್.ಸ್ವಾಮಿನಾಥನ್, ನ್ಯಾಯಮೂರ್ತಿ, ಮದ್ರಾಸ್‌ ಹೈಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.