ADVERTISEMENT

ಕರೂರ್‌ ಕಾಲ್ತುಳಿತ ಪ್ರಕರಣ: SOP ರಚನೆಗೆ 10 ದಿನಗಳ ಗುಡುವು ನೀಡಿದ ಮದ್ರಾಸ್ HC

ಪಿಟಿಐ
Published 27 ಅಕ್ಟೋಬರ್ 2025, 9:11 IST
Last Updated 27 ಅಕ್ಟೋಬರ್ 2025, 9:11 IST
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್   

ಚೆನ್ನೈ: ರಾಜಕೀಯ ಸಮಾವೇಶ, ರೋಡ್‌ಶೋ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಹತ್ತು ದಿನಗಳ ಒಳಗಾಗಿ ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಸೆ. 27ರಂದು ಕರೂರ್‌ನಲ್ಲಿ ಆಯೋಜನೆಗೊಂಡಿದ್ದ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಮುಖಂಡ ವಿಜಯ್ ಅವರ ರೋಡ್‌ಶೋ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 41 ಜನ ಮೃತಪಟ್ಟಿದ್ದರು. ಪ್ರಕರಣ ಕುರಿತ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಂ.ಎಂ.ಶ್ರೀವಾಸ್ತವ ಹಾಗೂ ನ್ಯಾ. ಜಿ. ಅರುಲ್ ಮುರುಗನ್ ಅವರಿದ್ದ ಪೀಠ ನಡೆಸಿತು. ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ಪೀಠ ಮಾಹಿತಿ ಕೇಳಿತು.

‘ಎಸ್‌ಒಪಿ ರಚನೆಯಾಗುವವರೆಗೂ ಯಾವುದೇ ರಾಜಕೀಯ ರ‍್ಯಾಲಿಗಳು ಮತ್ತು ರೋಡ್‌ಶೋಗಳನ್ನು ಆಯೋಜಿಸಲು ಸರ್ಕಾರ ಅವಕಾಶ ನೀಡುವುದಿಲ್ಲ. ಆದರೆ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ. ರವೀಂದ್ರನ್ ಪೀಠಕ್ಕೆ ತಿಳಿಸಿದರು.

ADVERTISEMENT

‘ಎಸ್‌ಒಪಿ ರಚನೆಗೆ ಸಂಬಂಧಿಸಿದಂತೆ ಪೊಲೀಸ್, ಅಗ್ನಿಶಾಮಕ, ಸ್ಥಳೀಯ ನಗರ ಸಂಸ್ಥೆಗಳನ್ನು ಸಂಪರ್ಕಿಸಬೇಕಾಗಿದೆ. ಅದಕ್ಕಾಗಿ ಹೆಚ್ಚುವರಿ ಸಮಯ ನೀಡಬೇಕು’ ಎಂದು ಕೋರಿದರು.

ಹೆಚ್ಚಿನ ಸಮಯ ನೀಡಲು ನಿರಾಕರಿಸಿದ ಪೀಠ, ‘ಹತ್ತು ದಿನಗಳ ಒಳಗಾಗಿ ಎಸ್‌ಒಪಿ ರಚಿಸಬೇಕು. ಇಲ್ಲವಾದಲ್ಲಿ ಆದೇಶ ನೀಡಲಾಗುವುದು’ ಎಂದಿತು.

ಈ ಪ್ರಕರಣದಲ್ಲಿ ಮಧ್ಯಂತರ ಅರ್ಜಿದಾರರನ್ನಾಗಿ ಸೇರಿಸಿಕೊಳ್ಳಲು ಅನುಮತಿ ಕೋರಿ ಎಐಎಡಿಎಂಕೆ ಕೋರಿಕೆ ಸಲ್ಲಿಸಿತು. ಪೀಠವು ಮುಂದಿನ ವಿಚಾರಣೆಯನ್ನು ನ. 11ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿಕೆ ಹಿಂಪಡೆಯುವ ಅರ್ಜಿಯನ್ನು ವಜಾಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.