
ಸೀತಾಪುರ (ಉತ್ತರ ಪ್ರದೇಶ): ಅಕ್ರಮವಾಗಿ ನಡೆಯುತ್ತಿದ್ದ ಮದರಸಾದಲ್ಲಿ ಮೌಲ್ವಿಯೊಬ್ಬರು ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಆರೋಪ ಸುಳ್ಳು ಎಂದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಲ್ಲಿನ ಕೊತ್ವಾಲಿ ಪ್ರದೇಶದಲ್ಲಿರುವ ರಿಜ್ವಿಯಾ ಗುಲ್ಶನ್ ಫಾತಿಮಾ ಮದರಸಾದ ಮೌಲ್ವಿ ಇರ್ಫಾನ್ ಉಲ್ ಖಾದ್ರಿಯು ತಮ್ಮ 15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ’ ಎಂದು ಸಂತ್ರಸ್ತೆಯ ತಾಯಿ ನವೆಂಬರ್ 4ರಂದು ದೂರು ದಾಖಲಿಸಿದ್ದರು’ ಎಂದು ಠಾಣಾಧಿಕಾರಿ ನೇಹಾ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
‘ದೂರು ದಾಖಲಿಸಿದ ಬಳಿಕ ಖಾದ್ರಿ ನಾಪತ್ತೆಯಾಗಿದ್ದರು. ಬಳಿಕ ಅವರ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ ಅತ್ಯಾಚಾರವಾಗಿಲ್ಲ ಎಂಬುದು ದೃಢಪಟ್ಟಿತ್ತು. ಮರುದಿನ ಮತ್ತೆ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾಳೆ’ ಎಂದು ಹೇಳಿದ್ದಾರೆ.
‘ಅತ್ಯಾಚಾರ ನಡೆದಿರುವುದು ಖಚಿತಪಟ್ಟಿಲ್ಲ. ಈ ಕುರಿತು ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಸಿಂಗ್ ತಿಳಿಸಿದ್ದಾರೆ.
‘ಬಾಲಕಿ ಹಾಗೂ ಅವರ ಕುಟುಂಬಸ್ಥರು ಖಾದ್ರಿ ಮೇಲೆ ಯಾವ ಕಾರಣಕ್ಕೆ ಅತ್ಯಾಚಾರ ಆರೋಪ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.