ADVERTISEMENT

ಕಾಂಗ್ರೆಸ್ ಬೆವರಿಳಿಸಿದ ಮಧ್ಯಪ್ರದೇಶದ 'ಮಾಮಾಜೀ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:14 IST
Last Updated 12 ಡಿಸೆಂಬರ್ 2018, 19:14 IST

ನವದೆಹಲಿ: ಮಾಮಾ, ಮಾಮಾಜೀ ಎಂದು ಕರೆಯಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಜನಪ್ರಿಯ ನಾಯಕ. ಹದಿಮೂರು ವರ್ಷಗಳ ರಾಜ್ಯಭಾರದ ನಂತರವೂ ಆಡಳಿತ ವಿರೋಧಿ ಭಾವನೆಯನ್ನು ಬಹುಮಟ್ಟಿಗೆ ಕಟ್ಟಿ ಹಾಕಿದ್ದು ಮತ್ತು ಕಡೆಯ ನಿಮಿಷದ ತನಕ ಜಿದ್ದಾಜಿದ್ದಿ ಸ್ಪರ್ಧೆ ನೀಡಿದ್ದು ಅವರ ಸಾಧನೆ. ಆದರೂ ಸೋಲು ತಪ್ಪಲಿಲ್ಲ.

2003ರಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿ ಮುಖ್ಯಮಂತ್ರಿಯಾದವರು ಉಮಾಭಾರತಿ. ಶೀಘ್ರವೇ ಹುಬ್ಬಳ್ಳಿ ಈದ್ಗಾ ಮೈದಾನ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಬೇಕಾಯಿತು. ವಾಜಪೇಯಿ ಆಯ್ಕೆ ಬಾಬುಲಾಲ್ ಗೌರ್‌ ಬಹುಕಾಲ ಬಾಳಲಿಲ್ಲ. ಸಂಸದ ಶಿವರಾಜಸಿಂಗ್ ಚೌಹಾಣ್ ನೇಮಕವಾಯಿತು. ಕಾಂಗ್ರೆಸ್‌ನ ದಿಗ್ವಿ
ಜಯ ಸಿಂಗ್ ಆಡಳಿತದಲ್ಲಿ ಹದಗೆಟ್ಟಿದ್ದ ರಸ್ತೆ ಮತ್ತು ವಿದ್ಯುಚ್ಛಕ್ತಿ ಪರಿಸ್ಥಿತಿ ಸುಧಾರಿಸಿದರು.

ಚೌಹಾಣ್ ಕಾಲದಲ್ಲಿ ಮಧ್ಯಪ್ರದೇಶದ ಕೃಷಿ ಉತ್ಪಾದನೆ ದೊಡ್ಡ ಜಿಗಿತ ಕಂಡಿತು. ಸಮೃದ್ಧ ಕೃಷಿ ಉತ್ಪನ್ನಕ್ಕೆ ನ್ಯಾಯವಾದ ಬೆಂಬಲ ಬೆಲೆ ನೀಡುವಲ್ಲಿ ಶೋಚನೀಯವಾಗಿ ಸೋತರು. 'ಮೇಲ್ಜಾತಿಗಳು', ಹಿಂದುಳಿದ ವರ್ಗಗಳು ಹಾಗೂ ಕೆಲಮಟ್ಟಿಗೆ ದಲಿತರ ಬೆಂಬಲ ಸಂಪಾದಿಸಿದರು. ಪ್ರತಿಪಕ್ಷ ಕಾಂಗ್ರೆಸ್‌ನ ಒಳಜಗಳದ ಅನುಕೂಲವೂ ಇಷ್ಟು ಕಾಲ ಅವರಿಗೆ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವು
ದಾಗಿ ಬುಧವಾರ ಮುಂಜಾನೆ ಮಾಯಾವತಿ ಘೋಷಣೆ ನಂತರ ಇನ್ನು ಆಟ ಮುಗಿಯಿತೆಂದು ಭಾವಿಸಿ ರಾಜೀನಾಮೆ ನೀಡಿದರು. ಬಡಾಯಿ ಕೊಚ್ಚಿಕೊಳ್ಳದೆ ಎಲೆಮರೆಯ ಕಾಯಿಯ ಬದುಕನ್ನು ಇಷ್ಟಪಡುವ ಶಿವರಾಜ್ ವಯಸ್ಸು ಇನ್ನೂ 59. ಇನ್ನೂ ಎತ್ತರಕ್ಕೆ ಏರಬಹುದಾದ ಭರವಸೆಯ ರಾಜಕಾರಣಿ.

ADVERTISEMENT

ಬಿಜೆಪಿಗೆ 30 ಲೋಕಸಭಾ ಸೀಟು ನಷ್ಟ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಒಟ್ಟು ಲೋಕಸಭಾ ಸ್ಥಾನಗಳು 65. 2014ರ ಲೋಕಸಭಾ ಚುನಾವಣೆ ಸಂದರ್ಭ ಮೋದಿ ಗಾಳಿಯಿಂದ ಬಿಜೆಪಿ 62ಅನ್ನು ಗೆದ್ದುಕೊಂಡಿತ್ತು. ಈ ಮೂರೂ ರಾಜ್ಯಗಳಲ್ಲಿದ್ದ ಬಿಜೆಪಿ ಸರ್ಕಾರಗಳು ಈಗ ಸೋತಿವೆ. ಸೋಲಿನ ಫಲಿತಾಂಶಗಳನ್ನು ಲೋಕಸಭೆ ಚುನಾವಣೆಗಳಿಗೆ ಅನ್ವಯಿಸಿದರೆ ಬಿಜೆಪಿ 2019ರಲ್ಲಿ ಹೆಚ್ಚೆಂದರೆ 31 ಸೀಟುಗಳನ್ನು ಗೆಲ್ಲಬಹುದು. ಪರಿಸ್ಥಿತಿ ಬಿಗಡಾಯಿಸಿದರೆ ಈ ಸಂಖ್ಯೆ ಇನ್ನೂ ಕುಸಿಯಬಹುದು.

ನಾಟಕೀಯ ಬೆಳವಣಿಗೆ ನಡೆದರೆ ಹೆಚ್ಚಲೂಬಹುದು. ಆದರೆ ಪುನಃ 62 ಗೆಲ್ಲುವುದು ದುಸ್ತರ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ವಿಷಯಗಳ ಮೇಲೆ ನಡೆಯುತ್ತವೆ. ಆದರೆ 2004, 2009 ಹಾಗೂ 2014 ರಲ್ಲಿ ಕೂಡ ಈ ಮೂರು ರಾಜ್ಯಗಳಲ್ಲಿ ವಿಧಾನಸಭೆ ನಡೆದ ಆರು ತಿಂಗಳ ಅಂತರದ ಒಳಗೆ ಲೋಕಸಭಾ ಚುನಾವಣೆಗಳು ಜರುಗಿದ್ದವು. ಈ ಎಲ್ಲ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಬಹುತೇಕ ವಿಧಾನಸಭಾ ಚುನಾವಣೆ ಫಲಿತಾಂಶಗಳನ್ನೇ ಬಿಂಬಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.