ADVERTISEMENT

ಅತ್ಯಾಚಾರ, ಗರ್ಭಪಾತ ಮಾಡಿ ಭ್ರೂಣ ದಹನ: 70ರ ವೃದ್ಧ ಮತ್ತು ಸ್ನೇಹಿತನ ಬಂಧನ

ಪಿಟಿಐ
Published 19 ಜೂನ್ 2021, 16:15 IST
Last Updated 19 ಜೂನ್ 2021, 16:15 IST
   

ಬುಲ್ದಾನ (ಮಹಾರಾಷ್ಟ್ರ): ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದೂ ಅಲ್ಲದೇ, ಆಕೆಗೆ ಗರ್ಭಪಾತ ಮಾಡಿ ನಾಲ್ಕು ತಿಂಗಳ ಭ್ರೂಣವನ್ನು ಸುಟ್ಟುಹಾಕಿರುವ ಘಟನೆ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 70 ವರ್ಷದ ವೃದ್ಧ ಮತ್ತು ಆತನ ಸ್ನೇಹಿತ (50ವರ್ಷ)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಲ್ದಾನಾ ಜಿಲ್ಲೆಯ ಜಲಗಾವ್‌ ಜಮದ್‌ ತಾಲೂಕಿನ ಇಸ್ಲಾಮ್‌ಪುರದಲ್ಲಿರುವ ವೃದ್ಧನ ತೋಟಕ್ಕೆ ಬುದ್ಧಿಮಾಂದ್ಯ ಯುವತಿ ಆಗಾಗ್ಗೆ ಹೋಗಿ ಬರುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೃದ್ಧ ಯುವತಿಯ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿದು ಬಂದಿದೆ.

ಇದರ ನಂತರ, 2021ರ ಮಾರ್ಚ್‌ನಲ್ಲಿ ವೃದ್ಧನ ಸ್ನೇಹಿತನೂ ಕೂಡ ಯುವತಿಯ ಮೇಲೆ ಆಗಾಗ್ಗೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಇದೆಲ್ಲದರ ಪರಿಣಾಮವಾಗಿ ಯುವತಿ ಗರ್ಭವತಿಯಾಗಿದ್ದು, ಆಕೆಗೆ ಆರೋಪಿಗಳಿಬ್ಬರೂ ಸೇರಿ ಗರ್ಭಪಾತದ ಮಾತ್ರೆಗಳನ್ನು ಕುಡಿಸಿದ್ದಾರೆ. ಇದರಿಂದ ಗರ್ಭಪಾತವಾಗಿದ್ದು, ನಾಲ್ಕು ತಿಂಗಳ ಭ್ರೂಣವನ್ನು ಇಬ್ಬರೂ ಸೇರಿ ಸುಟ್ಟು ಹಾಕಿದ್ದಾರೆ.

ಈ ಘಟನೆ ಕುರಿತು ಪೊಲೀಸರಿಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ಅತ್ಯಾಚಾರ ಮತ್ತು ಇತರ ಆರೋಪಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಜೂನ್ 22 ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಚಿನ್ ವಕ್ಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.