ADVERTISEMENT

ಮಹಾರಾಷ್ಟ್ರ: ₹ 21 ಕೋಟಿ ಮೌಲ್ಯದ ಯುರೇನಿಯಂ ಜಪ್ತಿ, ಇಬ್ಬರ ಬಂಧನ

ಪಿಟಿಐ
Published 6 ಮೇ 2021, 14:36 IST
Last Updated 6 ಮೇ 2021, 14:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈ ಹೊರವಲಯದ ಮನ್‌ಖುರ್ದ್‌ಎಂಬಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಕಾರ್ಯಾಚರಣೆ ನಡೆಸಿ ₹ 21.30 ಕೋಟಿ ಮೌಲ್ಯದ 7 ಕೆ.ಜಿ ಯುರೇನಿಯಂ ಜಪ್ತಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗರ್‌ ಪಾಂಡ್ಯ ಹಾಗೂ ಅಬು ತಾಹಿರ್‌ ಅಫ್ಜಲ್‌ ಹುಸೇನ್‌ ಚೌಧರಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 12 ರ ವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಜಪ್ತಿ ಮಾಡಿದ ಯುರೇನಿಯಂಅನ್ನು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ವಿಶ್ಲೇಷಿಸಿ, ವರದಿ ನೀಡಿದ್ದಾರೆ. ಅಧಿಕ ವಿಕಿರಣ ಹೊರಸೂಸುವ ಈ ಮೂಲಧಾತು, ಮಾನವನ ಜೀವಕ್ಕೆ ಅಪಾಯ ತರಬಲ್ಲದು ಎಂಬುದಾಗಿ ವಿಜ್ಞಾನಿಗಳು ವರದಿಯಲ್ಲಿ ವಿವರಿಸಿದ್ದಾರೆ’ ಎಂದು ಎಟಿಎಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಠಾಣೆ ನಿವಾಸಿ, 27 ವರ್ಷದ ಜಿಗರ್‌ ಪಾಂಡ್ಯ ಎಂಬ ವ್ಯಕ್ತಿ ಯುರೇನಿಯಂನ ಕೆಲವು ತುಣುಕುಗಳನ್ನು ಹೊಂದಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಎಟಿಎಸ್‌ನ ನಾಗಪಡ ಘಟಕದ ಅಧಿಕಾರಿಗಳು ಆತನನ್ನು ಫೆಬ್ರುವರಿ 14ರಂದು ವಶಕ್ಕೆ ಪಡೆದರು.

‘ಯುರೇನಿಯಂ ತುಣುಕುಗಳನ್ನು ಮಾರಾಟ ಮಾಡಲು ಗ್ರಾಹಕನಿಗಾಗಿ ಹುಡುಕುತ್ತಿದ್ದೆ. ಇವುಗಳನ್ನು ಮನ್‌ಖುರ್ದ್‌ ನಿವಾಸಿ ಅಬು ತಾಹಿರ್‌ ಅಫ್ಜಲ್‌ ಹುಸೇನ್‌ ಚೌಧರಿ (31) ತನಗೆ ನೀಡಿದ್ದ ಎಂಬುದಾಗಿ ಜಿಗರ್‌ ಪಾಂಡ್ಯ ವಿಚಾರಣೆಗೆ ತಿಳಿಸಿದ’ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಕುರ್ಲಾ ಸ್ಕ್ರಾಪ್‌ ಅಸೋಸಿಯೇಶನ್‌ಗೆ ಸೇರಿದ ಕಟ್ಟಡದಲ್ಲಿ ಎಟಿಎಸ್‌ ಅಧಿಕಾರಿಗಳು ಚೌಧರಿಯನ್ನು ಬಂಧಿಸಿದರು. ಅದೇ ಸ್ಥಳದಲ್ಲಿ 7.1 ಕೆ.ಜಿ ಕಚ್ಚಾ ಯುರೇನಿಯಂ ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.

ನಾಗಪುರದಲ್ಲಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕರು ನೀಡಿದ ದೂರಿನನ್ವಯ, ಬಂಧಿತರ ವಿರುದ್ಧ ಪರಮಾಣು ಇಂಧನ ಕಾಯ್ದೆ–1962 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.