ADVERTISEMENT

Maha Kumbh 2025: ಸನಾತನ ಮಂಡಳಿಯ ಕರಡು ಸಂವಿಧಾನ ಜ.27ರಂದು ಘೋಷಣೆ

ಪಿಟಿಐ
Published 23 ಜನವರಿ 2025, 12:21 IST
Last Updated 23 ಜನವರಿ 2025, 12:21 IST
<div class="paragraphs"><p>ಗಂಗಾ ನದಿ ತೀರದಲ್ಲಿ ಭಕ್ತರು</p></div>

ಗಂಗಾ ನದಿ ತೀರದಲ್ಲಿ ಭಕ್ತರು

   

ಪಿಟಿಐ ಚಿತ್ರ

ಮಹಾಕುಂಭ ನಗರ: 'ಧರ್ಮ ಸಭೆ' ಜನವರಿ 27ರಂದು ಸೆಕ್ಟರ್‌ 17ರಲ್ಲಿ ನಿಗದಿಯಾಗಿದೆ. ಆ ದಿನವನ್ನು 'ಧರ್ಮ ಸ್ವಾತಂತ್ರ್ಯ ದಿನ'ವನ್ನಾಗಿ ಸ್ಮರಿಸಲಾಗುವುದು. ಅದೇ ದಿನ ಸನಾತನ ಮಂಡಳಿಯು ಸಂವಿಧಾನದ ಕರಡನ್ನು ಮಂಡಿಸಲಿದೆ ಎಂದು ಆಧ್ಯಾತ್ಮಿಕ ಪ್ರವಚನಕಾರ ದೇವಕಿನಂದನ ಠಾಕೂರ್ ಅವರು ಗುರುವಾರ ಘೋಷಿಸಿದ್ದಾರೆ.

ADVERTISEMENT

ನಿರಂಜನಿ ಅಖಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಠಾಕೂರ್, 'ನಮ್ಮ ದೇವಾಲಯಗಳು ಸರ್ಕಾರಗಳ ನಿಯಂತ್ರಣದಲ್ಲಿವೆ. ಹಾಗಾಗಿ, ನಮ್ಮ ಧರ್ಮವು ಸ್ವತಂತ್ರವಾಗಿಲ್ಲ. ನಮ್ಮ ಗುರುಕುಲಗಳನ್ನು (ಸಾಂಪ್ರದಾಯಿಕ ಶಾಲೆಗಳು) ಮುಚ್ಚಲಾಗಿದೆ. ನಮ್ಮ ಗೋ ಮಾತಾ ಬೀದಿಗಳಲ್ಲಿ ಅಲೆಯುತ್ತಿವೆ. ನಮ್ಮ ಉದ್ದೇಶಗಳನ್ನು ಮುನ್ನಡೆಸಲು ಸನಾತನ ಮಂಡಳಿಯ ಅಗತ್ಯವಿದೆ' ಎಂದು ಹೇಳಿದ್ದಾರೆ.

ಧರ್ಮ ಸಭೆಯ ಮಹತ್ವವನ್ನು ಸಾರಿದ ಅವರು, 'ಎಲ್ಲ ಅಖಾಡಗಳು, ನಾಲ್ಕು ಶಂಕರಾಚಾರ್ಯ ಪೀಠಗಳ ಮುಖ್ಯಸ್ಥರು ಮತ್ತು ಸನಾತನ ಧರ್ಮದೊಂದಿಗೆ ನಂಟು ಇರುವ ವ್ಯಕ್ತಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರವು ಸನಾತನ ಮಂಡಳಿ ರಚಿಸಬೇಕು' ಎಂದು ಒತ್ತಾಯಿಸಿದ್ದಾರೆ.

ಜುನಾ ಅಖಾಡದ ಮಹಂತ್‌ ಸ್ವಾಮಿ ಯತೀದ್ರಾನಂದ ಗಿರಿ ಅವರು, 'ಸನಾತನ ಮಂಡಳಿಯು ಭಾರತಕ್ಕಷ್ಟೇ ಅಲ್ಲ. ಸಮಸ್ತ ಮನುಕುಲಕ್ಕೇ ಅನಿವಾರ್ಯವಾಗಿದೆ. ಭಯೋತ್ಪಾದನೆ, ಧ್ವೇಷ ಮತ್ತು ಅರಾಜಕತೆಯನ್ನು ತೊಡೆದುಹಾಕಲು ಸನಾತನ ಮಂಡಳಿಯಿಂದ ಸಾಧ್ಯ' ಎಂದು ಪ್ರತಿಪಾದಿಸಿದ್ದಾರೆ.

ನಿರಂಜನಿ ಅಖಾಡದ ಮಹಂತ್‌ ಸ್ವಾಮಿ ಪ್ರೇಮಾನಂದಪುರಿ ಅವರು, 'ಗಂಗೆಯ ಭೂಮಿಯು ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾಗಿ, ಸೂರ್ಯ ಸೃಷ್ಟಿಯಾದಾಗಿನಿಂದಲೂ ಸನಾತನ ಧರ್ಮವು ಅಸ್ತಿತ್ವದಲ್ಲಿದೆ ಎಂಬುದನ್ನು ನಾವೆಲ್ಲರೂ ಸಾರಬೇಕು. ದೇಶದ ಸಮಗ್ರತೆಯನ್ನು ಕಾಪಾಡಲು ಸನಾತನ ಮಂಡಳಿಯ ಸ್ಥಾಪನೆ ನಿರ್ಣಾಯಕ' ಎಂದು ಒತ್ತಿ ಹೇಳಿದ್ದಾರೆ.

'ಸನಾತನ ಮಂಡಳಿಯ ಸಂವಿಧಾನದ ಕರಡನ್ನು ಅಂತಿಮಗೊಳಿಸಿ, ಜನವರಿ 27ರಂದು ನಡೆಯುವ ಧರ್ಮ ಸಭೆಯಲ್ಲಿ ಸರ್ವಧರ್ಮಗಳ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು' ಎಂದು ಅಖಿಲ ಭಾರತೀಯ ಅಖಾಡ ಪರಿಷತ್‌ ಅಧ್ಯಕ್ಷ ಮಹಂತ್‌ ರವೀಂದ್ರ ಪುರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.