ಅಖಿಲೇಶ್ ಯಾದವ್
ಮಹಾಕುಂಭ ನಗರ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ ಪ್ರಯಾಗ್‌ರಾಜ್‌ನ ‘ಸಂಗಮ’ದಲ್ಲಿ ಪುಣ್ಯಸ್ನಾನ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಮಹಾಕುಂಭ’ ಮೇಳಕ್ಕೆ ಬರುವ ಭಕ್ತರಿಗೆ ಉತ್ತರಪ್ರದೇಶ ಸರ್ಕಾರವು ಇನ್ನಷ್ಟು ಅತ್ಯುತ್ತಮ ವ್ಯವಸ್ಥೆ ಮಾಡಬಹುದಿತ್ತು. ‘ಸಂಗಮ’ ತಲುಪಲು ಗಂಟೆಗಟ್ಟಲೇ ನಡೆಯುವಂತೆ ಮಾಡಿರುವುದು ಸರಿಯಲ್ಲ, ರಾಜ್ಯ ಸರ್ಕಾರವು ಸಾಕಷ್ಟು ಬಜೆಟ್ ಹೊಂದಿದೆ’ ಎಂದು ತಿಳಿಸಿದರು.
ಮಹಾಕುಂಭ ಮೇಳವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕುರಿತು ಟೀಕೆ ಮಾಡಿದ ಅವರು, ‘ನಕಾರಾತ್ಮಕ ಹಾಗೂ ವಿಭಜನಕಾರಿ ರಾಜಕೀಯ’ಕ್ಕೆ ಇಂತಹ ಸಮಾರಂಭದಲ್ಲಿ ಅವಕಾಶವಿಲ್ಲ. ಪ್ರತಿಯೊಬ್ಬರೂ ಕೂಡ ತಮ್ಮ ಸ್ವ ಇಚ್ಛೆಯಿಂದಲೇ ಇಲ್ಲಿಗೆ ಭೇಟಿ ನೀಡುತ್ತಾರೆ. ಯಾರೂ ಕೂಡ ಅವರಿಗೆ ಆಹ್ವಾನ ನೀಡುವುದಿಲ್ಲ’ ಎಂದು ತಿಳಿಸಿದರು.
‘ಅಖಿಲೇಶ್ ಯಾದವ್ ಅವರು ಮಹಾಕುಂಭ ಮೇಳಕ್ಕೆ ಕಡ್ಡಾಯವಾಗಿ ಭೇಟಿ ನೀಡಿ, ಅಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಬೇಕು’ ಎಂದು ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕಿಡಿಕಾರಿದ ಅವರು, ‘ನನ್ನ ಮನಸ್ಸಿನಂತೆ ನಡೆದುಕೊಳ್ಳುತ್ತೇನೆ, ಬಿಜೆಪಿ ನಾಯಕರ ಆಹ್ವಾನ ಬೇಕಿಲ್ಲ’ ಎಂದರು.
ಈ ಹಿಂದೆ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿಯೂ ಅಖಿಲೇಶ್ ಯಾದವ್ ಅವರು ಪುಣ್ಯಸ್ನಾನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.