ADVERTISEMENT

ಮಹಾಕುಂಭ ಮುಕ್ತಾಯ | ನನ್ನಿಂದ ಅಪಚಾರವಾಗಿದ್ದರೆ ಕ್ಷಮಿಸಿ: ಪ್ರಧಾನಿ ಮೋದಿ

ಪಿಟಿಐ
Published 27 ಫೆಬ್ರುವರಿ 2025, 14:06 IST
Last Updated 27 ಫೆಬ್ರುವರಿ 2025, 14:06 IST
ಮೋದಿ
ಮೋದಿ   

ನವದೆಹಲಿ: ‘ಮಹಾಕುಂಭ ಮುಕ್ತಾಯಗೊಂಡಿದೆ; ಏಕತೆಯ ‘ಮಹಾಯಜ್ಞ’ಯೊಂದು ಮುಕ್ತಾಯಗೊಂಡಿದೆ. ಗಂಗಾ ಮಾತೆ, ತಾಯಿ ಯಮುನೆ ಮತ್ತು ಸರಸ್ವತಿ ಹಾಗೂ ಜನರು ನನಗೆ ದೇವರ ಸಮಾನ. ನಿಮ್ಮ ಸೇವೆಯಲ್ಲಿ ಏನಾದರೂ ಅಪಚಾರವಾಗಿದ್ದರೆ ನನ್ನನ್ನು ಕ್ಷಮಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘವಾದ ಬರಹವನ್ನು ಬರೆದಿದ್ದಾರೆ.

ಜ.13ರಿಂದ ಆರಂಭಗೊಂಡು, 45 ದಿನಗಳವರೆಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಲೇಖನ ಬರೆದಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.

‘ಗಂಗೆ, ಯಮುನೆ ಸೇರಿ ಇತರ ನದಿಗಳ ಸ್ವಚ್ಛತೆಯು ಜನರ ಬದುಕಿನೊಂದಿಗೆ ನಂಟು ಹೊಂದಿದೆ. ಈ ನದಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ನನ್ನ ಬದ್ಧತೆಗೆ ಈ ಮಹಾ ಕಾರ್ಯಕ್ರಮವು ಇಂಬು ನೀಡಿದೆ’ ಎಂದರು. 

ADVERTISEMENT

‘ಅಮೆರಿಕದ ಜನಸಂಖ್ಯೆಯ ಎರಡರಷ್ಟು ಜನರು ಮೇಳದಲ್ಲಿ ಭಾಗವಹಿಸಿದ್ದಾರೆ. ಕಳೆದ ಬಾರಿಯ ಕುಂಭಮೇಳವನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಅಂದಾಜು ಮಾಡಿಕೊಂಡಿದ್ದಕ್ಕಿಂತ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಂದರು. ಇಷ್ಟೊಂದು ಜನರಿಗೆ ವ್ಯವಸ್ಥೆ ಮಾಡುವುದು ಸುಲಭದ ವಿಚಾರವಲ್ಲ’ ಎಂದರು. 

ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

144 ವರ್ಷಗಳ ಬಳಿಕ ನಡೆದ ಮಹಾಕುಂಭ ಮೇಳವು ಭಾರತದ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗುವ ಸಂದೇಶವನ್ನು ನೀಡಿದೆ. ಇದು ‘ವಿಕಸಿತ ಭಾರತ’ದ ಸಂದೇಶ
- ನರೇಂದ್ರ ಮೋದಿ ಪ್ರಧಾನಿ
ಮಹಾಕುಂಭದ ಯಶಸ್ಸು ಸಂಪೂರ್ಣವಾಗಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಕಾರಣದಿಂದ ಈ ಯಶಸ್ಸು ಲಭಿಸಿದೆ
ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ

‘ಹೊಸ ಭಾಷ್ಯ ಬರೆದ ಮಹಾಕುಂಭ’

‘ಕೋಟ್ಯಂತರ ಭಾರತೀಯರು ಅತ್ಯುತ್ಸಾಹದಿಂದ ಮಹಾಕುಂಭದಲ್ಲಿ ಪಾಲ್ಗೊಂಡ ಬಗ್ಗೆ ಅಧ್ಯಾತ್ಮದ ವಿಧ್ವಾಂಸರು ವಿಶ್ಲೇಷಣೆ ಮಾಡಿದರೆ ‘ಪರಂಪರೆಗಳ ಬಗ್ಗೆ ಹೆಮ್ಮೆ ಇರುವ ಭಾರತವು ಈಗ ಹೊಸದೊಂದು ಶಕ್ತಿಯನ್ನು ಸಂಚಯಿಸಿಕೊಂಡು ಮುನ್ನುಗ್ಗುತ್ತಿದೆ’ ಎಂದೇ ಹೇಳುತ್ತಾರೆ.

ಹೊಸದೊಂದು ಯುಗದ ಆರಂಭ ಇದು ಎಂದು ನಾನು ನಂಬಿದ್ದೇನೆ. ಇದು ಭಾರತದ ಭವಿಷ್ಯದ ಭಾಷ್ಯ ಬರೆಯುತ್ತದೆ’ ಎಂದರು.  ‘ಪ್ರಯಾಗರಾಜ್‌ನಲ್ಲಿ ಜನವರಿ 13ರ ನಂತರ ನಡೆದ ಮಹಾಕುಂಭದ ದೃಶ್ಯಗಳು ಹೇಗಿದ್ದವು ಎಂದರೆ ದೇಶವೊಂದರ ಪ್ರಜ್ಞೆಯು ಜಾಗೃತಗೊಂಡಂತೆ; ನೂರಾರು ವರ್ಷಗಳ ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆದು ಹೊಸ ಪ್ರಜ್ಞೆಯನ್ನು ಉಸಿರಾಡಿದಂತೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.