ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ: ಮಹಾಕುಂಭವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ ಮತ್ತು ಇಷ್ಟು ದೊಡ್ಡ ಮೇಳದ ಯಶಸ್ವಿ ಆಯೋಜನೆಯು ಭಾರತದ ಸಾಮರ್ಥ್ಯಗಳ ಬಗ್ಗೆ ‘ಸಂದೇಹ ಮತ್ತು ಆತಂಕ’ ಹೊಂದಿದ್ದವರಿಗೆ ಸೂಕ್ತ ಉತ್ತರವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ ಹೇಳಿದರು.
ಆದರೆ ಅವರು ಮಾತನಾಡುವಾಗ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ. ಇದರಿಂದ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
‘ಸ್ವದೇಶಿ ಚಳವಳಿ, ಸ್ವಾಮಿ ವಿವೇಕಾನಂದ ಅವರ ಐತಿಹಾಸಿಕ ಷಿಕಾಗೊ ಭಾಷಣ, 1857ರ ಸ್ವಾತಂತ್ರ್ಯ ಸಂಗ್ರಾಮ, ಭಗತ್ ಸಿಂಗ್ ಅವರ ಪ್ರಾಣತ್ಯಾಗ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 'ದಿಲ್ಲಿ ಚಲೋ' ಕರೆ ಮತ್ತು ಮಹಾತ್ಮ ಗಾಂಧಿ ಅವರ ದಂಡಿ ಮೆರವಣಿಗೆಯಿಂದ ಸ್ಫೂರ್ತಿ ಪಡೆಯುವ ಮೂಲಕ ದೇಶವು ಸ್ವಾತಂತ್ರ್ಯ ಗಳಿಸಿತು. ಅದೇ ರೀತಿಯಲ್ಲಿ ಮಹಾಕುಂಭವು ಜಾಗೃತ ರಾಷ್ಟ್ರವೊಂದರ ಚೈತನ್ಯವನ್ನು ಪ್ರತಿಬಿಂಬಿಸುವ ಮಹತ್ವದ ಮೈಲಿಗಲ್ಲು’ ಎಂದು ಪ್ರಧಾನಿ ಬಣ್ಣಿಸಿದರು.
ಮೋದಿ ತಮ್ಮ 13 ನಿಮಿಷಗಳ ಭಾಷಣವನ್ನು ಕೊನೆಗೊಳಿಸುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶಿಸಲು ಎದ್ದು ನಿಂತರು. ಆದರೆ, ಸ್ಪೀಕರ್ ಓಂ ಬಿರ್ಲಾ ಅವರು ನಿಯಮಗಳನ್ನು ಉಲ್ಲೇಖಿಸಿ, ರಾಹುಲ್‌ಗೆ ಮಾತನಾಡಲು ಅವಕಾಶ ನಿರಾಕರಿಸಿದರು. ಇದರಿಂದ ಕೆರಳಿದ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಬಳಿ ಧಾವಿಸಿ ಪ್ರತಿಭಟನೆ ನಡೆಸಿದರು.
ಸದನವನ್ನು ಮೊದಲು 30 ನಿಮಿಷ ಮುಂದೂಡಲಾಯಿತು. ಮಧ್ಯಾಹ್ನ 1ಕ್ಕೆ ಕಲಾಪ ಮತ್ತೆ ಆರಂಭವಾದಾಗಲೂ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆದರೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗದ್ದಲದ ನಡುವೆಯೇ ಚರ್ಚೆಗೆ ಉತ್ತರಿಸಿದರು. ಅವರು ಮಾತು ಕೊನೆಗೊಳಿಸುತ್ತಿದ್ದಂತೆಯೇ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
‘ಏಕ ಭಾರತ, ಶ್ರೇಷ್ಠ ಭಾರತ’: ಪ್ರಯಾಗರಾಜ್‌ನ ಸಂಗಮದ ದಡದಲ್ಲಿ ವಿವಿಧ ಭಾಷೆಗಳನ್ನಾಡುವ ಜನರು 'ಹರ ಹರ ಗಂಗೆ' ಎಂದು ಜಪಿಸಿದ್ದು 'ಏಕ ಭಾರತ, ಶ್ರೇಷ್ಠ ಭಾರತ’ದ ನೋಟವನ್ನು ನಮ್ಮ ಮುಂದಿಟ್ಟಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
‘ಸುಮಾರು ಒಂದೂವರೆ ತಿಂಗಳು ನಡೆದ ಮಹಾಕುಂಭದಲ್ಲಿ ಭಕ್ತರು ತೋರಿದ ಉತ್ಸಾಹವನ್ನು ನಾವು ಕಂಡಿದ್ದೇವೆ. ಅನುಕೂಲತೆ ಮತ್ತು ಅನನುಕೂಲತೆಯ ಎಲ್ಲೆಯನ್ನು ಮೀರಿ ಲಕ್ಷಾಂತರ ಭಕ್ತರು ಅಲ್ಲಿ ಒಟ್ಟುಗೂಡಿದ್ದು ನಮ್ಮ ದೊಡ್ಡ ಶಕ್ತಿ’ ಎಂದು ಶ್ಲಾಘಿಸಿದರು.
ಮಹಾ ಕುಂಭಮೇಳದಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಂಡದ್ದನ್ನು ಕಂಡಿದ್ದೇವೆ. ಜಗತ್ತಿನ ಅತಿದೊಡ್ಡ ಮೇಳವು ಇಡೀ ದೇಶವನ್ನು ಒಗ್ಗೂಡಿಸಿದೆನರೇಂದ್ರ ಮೋದಿ, ಪ್ರಧಾನಿ
ಮಹಾಕುಂಭ ದಲ್ಲಿ ನಡೆದ ಕಾಲ್ತುಳಿತ ಘಟನೆ ಬಗ್ಗೆ ಉತ್ತರ ಪ್ರದೇಶ ಸರ್ಕಾರ ತನಿಖೆ ನಡೆಸಿದ್ದು, ಸಾವಿಗೀಡಾದವರ ಮತ್ತು ಗಾಯಗೊಂಡವರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಲೋಕಸಭೆಗೆ ತಿಳಿಸಿದರು.
ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ‘ಕಾಲ್ತುಳಿತ ಸೇರಿದಂತೆ ಯಾವುದೇ ದುರಂತ ಸಂಭವಿಸಿದರೆ ತನಿಖೆ ನಡೆಸುವ ಮತ್ತು ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡುವ ಜವಾಬ್ದಾರಿ ಸಂಬಂಧಪಟ್ಟ ರಾಜ್ಯ ಸರ್ಕಾರಗಳದ್ದಾಗಿರುತ್ತದೆ. ಕೇಂದ್ರ ಸರ್ಕಾರವು ಯಾವುದೇ ಮಾಹಿತಿಯನ್ನು ಇಟ್ಟುಕೊಂಡಿರುವುದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ
ದಲ್ಲಿ 30 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.