ADVERTISEMENT

ಮಹಾಕುಂಭ ಮೇಳ: 300 ಕಿ.ಮೀ. ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:54 IST
Last Updated 10 ಫೆಬ್ರುವರಿ 2025, 13:54 IST
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಭಕ್ತರು ‌ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರಿಂದ ಮಿರ್ಜಾಪುರ– ಪ್ರಯಾಗ್‌ರಾಜ್‌ ಹೆದ್ದಾರಿಯಲ್ಲಿ ಸೋಮವಾರ ದಟ್ಟಣೆ ಉಂಟಾಗಿತ್ತು–ಪಿಟಿಐ ಚಿತ್ರ
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಭಕ್ತರು ‌ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರಿಂದ ಮಿರ್ಜಾಪುರ– ಪ್ರಯಾಗ್‌ರಾಜ್‌ ಹೆದ್ದಾರಿಯಲ್ಲಿ ಸೋಮವಾರ ದಟ್ಟಣೆ ಉಂಟಾಗಿತ್ತು–ಪಿಟಿಐ ಚಿತ್ರ   

ಪ್ರಯಾಗ್‌ರಾಜ್‌, ಭೋಪಾಲ್‌: ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಪ್ರಯಾಗ್‌ರಾಜ್‌ನತ್ತ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರಿಂದ ಸೋಮವಾರ 300 ಕಿ.ಮೀ.ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು.

‘ಮೂರನೇ ‘ಅಮೃತ ಸ್ನಾನ’ವಾದ ವಸಂತ ಪಂಚಮಿ ಬಳಿಕ ಭಕ್ತರ ಸಂಖ್ಯೆ ಇಳಿಮುಖವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿತ್ತು. ಶನಿವಾರ, ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪ್ರಯಾಗರಾಜ್‌ನತ್ತ ಹೊರಟಿದ್ದರಿಂದ ಪ್ರಯಾಗರಾಜ್‌ ಸಂಪರ್ಕಿಸುವ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಸೋಮವಾರವೂ ಹೆದ್ದಾರಿಗಳಲ್ಲಿ ನೂರಾರು ಕಿ.ಮೀ. ದೂರದವರೆಗೆ ವಾಹನಗಳು ನಿಂತಿದ್ದವು. ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಪೊಲೀಸ್‌ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

‘48 ಗಂಟೆ‌ಗಳಿಂದ ಹೆದ್ದಾರಿಯಲ್ಲಿ ಸಿಲುಕಿದ್ದೇವೆ. 50 ಕಿ.ಮೀ. ಅಂತರ ಕ್ರಮಿಸಲು 10ರಿಂದ 12 ಗಂಟೆ ಸಮಯ ಕಳೆಯಿತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ADVERTISEMENT

ವಾರಾಣಸಿ, ಅಯೋಧ್ಯೆ, ಲಖನೌ, ಕಾನ್ಪುರ ಸಂಪರ್ಕಿಸುವ ಹೆದ್ದಾರಿಗಳಲ್ಲಿ 10ರಿಂದ 12 ಕಿ.ಮೀ. ತನಕವೂ ವಾಹನಗಳು ನಿಂತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಯಾಣ ಮುಂದೂಡಿ–ಸಿ.ಎಂ ಮನವಿ: ‘ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪ್ರಯಾಗರಾಜ್‌ನತ್ತ ತೆರಳುತ್ತಿರುವ ಕಾರಣ, ನೆರೆ ರಾಜ್ಯ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿಯೂ ಸಂಚಾರ ದಟ್ಟಣೆ ಉಂಟಾಗಿದೆ. ಅಲ್ಲಿಗೆ ತೆರಳುವುದನ್ನು ಕೆಲವು ದಿನಗಳ ಕಾಲ ಮುಂದೂಡಬೇಕು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಮನವಿ ಮಾಡಿದ್ದಾರೆ.

‘ಕೆಲ ದಿನಗಳಿಂದ ಜಬಲ್‌ಪುರ, ಸಿವಾನಿ, ಕಟನಿ, ಮೈಹರ್‌, ಸತ್‌ನಾ ಹಾಗೂ ರೇವಾ ಜಿಲ್ಲೆಗಳ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಪ್ರಯಾಗರಾಜ್‌ನತ್ತ ತೆರಳುತ್ತಿವೆ. ಹೀಗಾಗಿ ಕೆಲವು ದಿನಗಳ ಕಾಲ ಪ್ರವಾಸ ಮುಂದೂಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಪ್ರಯಾಗರಾಜ್‌ ಆಡಳಿತದ ಜೊತೆಗೆ ಮಧ್ಯಪ್ರದೇಶ ಸರ್ಕಾರವು ಸಂಪರ್ಕದಲ್ಲಿದೆ. ಸಂಚಾರ ಸ್ಥಗಿತಗೊಂಡಿದ್ದರೆ, ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿ. ಗೂಗಲ್‌ಮ್ಯಾಪ್‌ ನೋಡಿಕೊಂಡು, ಸಂಚಾರ ಸುಗಮವಾಗಿದ್ದರೆ ಮಾತ್ರ ಪ್ರಯಾಣ ಮುಂದುವರಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಭಕ್ತರಿಗೆ ಕುಡಿಯುವ ನೀರು, ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಕ್ಷತೆಗೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

ರೇವಾ ಜಿಲ್ಲೆಯ ಅಂತರ ರಾಜ್ಯ ಗಡಿಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಏನೇನು ಬೆಳವಣಿಗೆ..?

*ನಿತ್ಯವೂ ಸರಾಸರಿ 1.44 ಕೋಟಿ ಮಂದಿ, ಫೆ. 9ರವರೆಗೆ 44 ಕೋಟಿ ಮಂದಿ ಪುಣ್ಯಸ್ನಾನ

*ಮಕರ ಸಂಕ್ರಾಂತಿಯಂದು 3.5 ಕೋಟಿ, ಮೌನಿ ಅಮಾವಾಸ್ಯೆಯಂದು 7.4 ಕೋಟಿ ಪುಣ್ಯಸ್ನಾನ

*ಹೆಚ್ಚಿದ ದಟ್ಟಣೆ– ಫೆ.14ರವರೆಗೆ ಪ್ರಯಾಗ್‌ರಾಜ್‌ ಸೇರಿದಂತೆ 8 ನಿಲ್ದಾಣಗಳಿಂದ ವಿಶೇಷ ರೈಲು ವ್ಯವಸ್ಥೆ

*ಅಯೋಧ್ಯೆ, ವಾರಾಣಸಿಯಲ್ಲಿ ಹೆಚ್ಚಿದ ಒತ್ತಡ– ನಗರದ ಹೊರವಲಯದಲ್ಲಿ ಪಾರ್ಕಿಂಗ್‌ ವ್ಯವಸ್ಥೆ

*ಸುಗಮ ದರ್ಶನಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಮಹಾಕುಂಭ ಮೇಳಕ್ಕೆ ತೆರಳಲು ಪಟ್ನಾ ರೈಲು ನಿಲ್ದಾಣದಲ್ಲಿ ರೈಲು ಏರಲು ಪ್ರಯಾಣಿಕರು ಹರಸಾಹಸಪಟ್ಟರು–ಪಿಟಿಐ ಚಿತ್ರ

ಸಂಚಾರ ದಟ್ಟಣೆ: ಅಖಿಲೇಶ್‌ ಕಿಡಿ

‘ಪ್ರಯಾಗರಾಜ್‌ನ ಮಹಾಕುಂಭ ಮೇಳಕ್ಕೆ ಭೇಟಿ ನೀಡುವ ಹೆದ್ದಾರಿಗಳಲ್ಲಿ ಹೆಚ್ಚಿನ ವಾಹನದಟ್ಟಣೆ ಹಾಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಕಿಡಿಕಾರಿದ್ದಾರೆ. ‘ಪ್ರಯಾಗರಾಜ್‌ನಲ್ಲಿ ಪರಿಸ್ಥಿತಿ ಸುಧಾರಿಸಲು ಯಾರೂ ಮುಂದೆ ಬರುತ್ತಿಲ್ಲ ಯಾವ ಸಚಿವರೂ ಹೊಣೆಗಾರಿಕೆ ನಿಭಾಯಿಸುತ್ತಿಲ್ಲ‌. ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ಹೇಳಿದರು.  ‘ಸಂಚಾರ ದಟ್ಟಣೆಯಿಂದ ಆಹಾರ ಧಾನ್ಯಗಳು ತರಕಾರಿ ನಗರದ ಒಳಗೆ ಪ್ರವೇಶಿಸುತ್ತಿಲ್ಲ. ಔಷಧ ಪೆಟ್ರೊಲ್‌ ಡೀಸೆಲ್‌ ಕೊರತೆ ಉಂಟಾಗಿದೆ. ಕೋಟ್ಯಂತರ ಮಂದಿ ಹಲವು ಗಂಟೆ ಬಾಯಾರಿಕೆ ಹಸಿವಿನಿಂದ ಬಳಲುತ್ತಿದ್ದಾರೆ. ಇದು ನಿಜಕ್ಕೂ ಗಂಭೀರವಾದ ವಿಚಾರ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.