ಮಹಾ ನ್ಯೂಸ್ ಸುದ್ದಿವಾಹಿನಿ ಕಚೇರಿ ಮೇಲೆ ದಾಳಿ: ಕಿಟಕಿ, ಬಾಗಿಲು, ಕಾರುಗಳು ಪುಡಿ
ಹೈದರಾಬಾದ್: ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ನೆಟ್‌ವರ್ಕ್ ಹೊಂದಿರುವ ಮಹಾ ನ್ಯೂಸ್ ಸುದ್ದಿವಾಹಿನಿ ಕಚೇರಿ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವ ಘಟನೆ ಇಂದು ನಡೆದಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಮಹಾ ನ್ಯೂಸ್ ಕಚೇರಿ ಮೇಲೆ ದಾಳಿಯಾಗಿದೆ.
ದಾಳಿಯ ವೇಳೆ ಹತ್ತಾರು ಜನ ಕಚೇರಿ ಒಳ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಬಾಗಿಲು ಹಾಕಿ ಸಂಭವನೀಯ ಹೆಚ್ಚಿನ ಅಪಾಯವನ್ನು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ದಾಳಿಕೋರರು ಕಚೇರಿಯ ಕಿಟಕಿ– ಬಾಗಿಲು ಹಾಗೂ ಕಚೇರಿ ಮುಂದೆ ನಿಂತಿದ್ದ ಕಾರುಗಳನ್ನು ಪುಡಿಗಟ್ಟಿದ್ದಾರೆ.
ಘಟನೆಯ ದೃಶ್ಯಾವಳಿಗಳು ಮೊಬೈಲ್, ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ದಾಳಿಕೋರರ ಕೃತ್ಯವನ್ನು ಹಲವರು ಖಂಡಿಸಿದ್ದಾರೆ.
ಇತ್ತೀಚೆಗೆ ಮಹಾ ನ್ಯೂಸ್ ಟಿವಿಯಲ್ಲಿ ಬಿಆರ್‌ಎಸ್ ಪಕ್ಷದ ನಾಯಕ ಕೆ.ಟಿ.ಆರ್ ಅವರ ಬಗ್ಗೆ ಸರಣಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಬಿಆರ್‌ಎಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಮಹಾ ನ್ಯೂಸ್ ಸುದ್ದಿವಾಹಿನಿ ಎಕ್ಸ್‌ನಲ್ಲಿ ಆರೋಪಿಸಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಇದು ಎಂದು ವಾಹಿನಿ ಹೇಳಿದೆ.
ಬಿಜೆಪಿ, ಟಿಡಿಪಿ, ಜನಸೇನಾ ಹಾಗೂ ಕಾಂಗ್ರೆಸ್ ನಾಯಕರು ಮತ್ತು ಹಲವು ಪತ್ರಕರ್ತರು ದಾಳಿಯನ್ನು ಖಂಡಿಸಿದ್ದಾರೆ. ತೆಲುಗು ಹಿರಿಯ ಪತ್ರಕರ್ತ ಇನಾಗಂಟಿ ವೆಂಕಟರಾವ್ ಅವರು ಮಹಾ ನ್ಯೂಸ್ ಸುದ್ದಿ ವಾಹಿನಿಯನ್ನು ಮುನ್ನಡೆಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.