ADVERTISEMENT

ಮಹಾಕುಂಭ ಮೇಳ: 3.5 ಕೋಟಿ ಭಕ್ತರಿಂದ ‘ಅಮೃತ ಸ್ನಾನ’

ಪ್ರಯಾಗ್‌ರಾಜ್‌ನಲ್ಲಿ ಎರಡನೇ ದಿನವೂ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
ಪಿಟಿಐ
Published 14 ಜನವರಿ 2025, 15:28 IST
Last Updated 14 ಜನವರಿ 2025, 15:28 IST
   

ಮಹಾಕುಂಭ ನಗರ/ ಲಖನೌ: ವಿವಿಧ ಅಖಾಡಾಗಳ ಸಂತರು ಮತ್ತು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ‘ಮಕರ ಸಂಕ್ರಾಂತಿ' ದಿನದಂದು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಬಾರಿಯ ಮಹಾಕುಂಭ ಮೇಳದ ಮೂರು ‘ಅಮೃತ ಸ್ನಾನ’ಗಳಲ್ಲಿ (ಶಾಹೀ ಸ್ನಾನ) ಇದು ಮೊದಲನೆಯದು. 

12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸೋಮವಾರ ‘ಪುಷ್ಯ ಪೂರ್ಣಿಮಾ’ ದಿನದಂದು ಮೊದಲ ‘ಸ್ನಾನ’ ನಡೆದಿತ್ತು. ಸುಮಾರು 1.75 ಕೋಟಿ ಮಂದಿ ಪಾಲ್ಗೊಂಡಿದ್ದರು.

ಎರಡನೇ ದಿನವಾದ ಮಂಗಳವಾರ ವಿವಿಧ ಅಖಾಡಾಗಳ ಸದಸ್ಯರು ‘ಅಮೃತ ಸ್ನಾನ’ ಮಾಡಿದರು. ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮೊದಲನೆಯವರಾಗಿ ಸ್ನಾನದಲ್ಲಿ ಪಾಲ್ಗೊಂಡರೆ, ಶ್ರೀ ಶಂಭು ಪಂಚಾಯತಿ ಅಟಲ್‌ ಅಖಾಡಾ ಸೇರಿದಂತೆ ಇತರ ಅಖಾಡಾಗಳ ಸದಸ್ಯರು ಬಳಿಕ ಸ್ನಾನ ಘಟ್ಟಗಳತ್ತ ಬಂದರು. 

ADVERTISEMENT

ಈ ಬಾರಿಯ ಮಹಾಕುಂಭ ಮೇಳದಲ್ಲಿ ಸಾಧು ಸಂತರ 13 ಆಖಾಡಾಗಳು (ಗುಂಪು) ಭಾಗವಹಿಸಿವೆ. ಬೆಳಗಿನ ಜಾವ 3ರಿಂದ ಆರಂಭವಾದ ಸ್ನಾನದಲ್ಲಿ ಭಕ್ತರು ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡರು. ಈಟಿ ಮತ್ತು ತ್ರಿಶೂಲಗಳನ್ನು ಹಿಡಿದುಕೊಂಡ ನಾಗಾ ಸಾಧುಗಳಲ್ಲಿ ಕೆಲವರು ಕುದುರೆ ಸವಾರಿ ಮಾಡಿಕೊಂಡು ಮೆರವಣಿಗೆಯಲ್ಲಿ ಸ್ನಾನಕ್ಕೆ ತೆರಳಿದರು. 

‘ಹರ ಹರ ಮಹಾದೇವ’, ‘ಜೈ ಶ್ರೀ ರಾಮ್’ ಮತ್ತು ‘ಜೈ ಗಂಗಾ ಮಾತೆ’ ಎಂಬ ಘೋಷಣೆಗಳು ಮೊಳಗಿದವು. ಅನೇಕ ಭಕ್ತರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ವಿವಿಧ ಸ್ನಾನ ಘಟ್ಟಗಳ ಕಡೆಗೆ ಗುಂಪು ಗುಂಪಾಗಿ ಸಾಗಿದ್ದು ಕಂಡುಬಂತು. 

‘ಮೊದಲ ಅಮೃತ ಸ್ನಾನ ಸುಸೂತ್ರವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ’ ಎಂದು ಉತ್ತರ ಪ್ರದೇಶ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಸಂಜಯ್‌ ಪ್ರಸಾದ್ ತಿಳಿಸಿದ್ದಾರೆ. ಮಹಾಕುಂಭ ಮೇಳದ ತಾಣದಲ್ಲಿ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಪವಿತ್ರ ಸ್ನಾನ ಮಾಡಲು ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪ್ರಯಾಗ್‌ರಾಜ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಭಾರಿ ದಟ್ಟಣೆ ಕಂಡುಬಂತು. ಪ್ರಯಾಣಿಕರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.

ಕಿನ್ನರ ಅಖಾಡಾ ಭಾಗಿ: 

ಮಹಾಕುಂಭದ ಮೊದಲ ‘ಅಮೃತ ಸ್ನಾನ’ದ ಸಂದರ್ಭದಲ್ಲಿ, ಕಿನ್ನರ ಅಖಾಡಾದ ಸದಸ್ಯರೂ ಪವಿತ್ರ ಸ್ನಾನ ಮಾಡಿ ದೇಶದ ಪ್ರಗತಿಗಾಗಿ ಪ್ರಾರ್ಥಿಸಿದರು. ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ಕಿನ್ನರ ಅಖಾಡಾದ ನೇತೃತ್ವ ವಹಿಸಿದ್ದರು.

ಲಿಂಗತ್ವ ಅಲ್ಪಸಂಖ್ಯಾತ ಸದಸ್ಯರಿಗೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ 2015ರಲ್ಲಿ ‘ಕಿನ್ನರ ಅಖಾಡಾ’ ಸ್ಥಾಪಿಸಲಾಗಿದೆ. ಇದು ಧಾರ್ಮಿಕ ಚಟುವಟಿಕೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. 2019ರಲ್ಲಿ ಅಧಿಕೃತ ಮಾನ್ಯತೆ ಪಡೆದ ಈ ಅಖಾಡಾದ ಸದಸ್ಯರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿರುವುದು ಐತಿಹಾಸಿಕ ಮೈಲಿಗಲ್ಲು ಎನಿಸಿದೆ.

ಕಿನ್ನರ ಅಖಾಡಾದ ಸದಸ್ಯರು ತಮ್ಮ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮರ ಕಲೆಗಳ ಕೌಶಲದ ಮೂಲಕ ಎಲ್ಲರ ಗಮನ ಸೆಳೆದರು. ಖಡ್ಗ ಮತ್ತು ಇತರ ಅಸ್ತ್ರಗಳನ್ನು ಪ್ರದರ್ಶಿಸಿ ತಮ್ಮ ಸಾಮರ್ಥ್ಯ ಮತ್ತು ಶ್ರೀಮಂತ ಪರಂಪರೆಯನ್ನು ಅನಾವರಣಗೊಳಿಸಿದರು ಎಂದು ಉತ್ತರ ಪ್ರದೇಶ ಸರ್ಕಾರದ ಪ್ರಕಟಣೆ ತಿಳಿಸಿದೆ.

ಚೈತನ್ಯ ತುಂಬಿದ ನಾಗಾ ಸಾಧುಗಳು

*ಮಹಾಕುಂಭ ಮೇಳದ ಎರಡನೇ ದಿನ ಗಮನ ಸೆಳೆದ ನಾಗಾ ಸಾಧುಗಳು

*ಡೋಲುಗಳ ತಾಳಕ್ಕೆ ತಕ್ಕಂತೆ ಕುಣಿದು, ಸಾಂಪ್ರದಾಯಿಕ ಆಚರಣೆಗಳನ್ನು ಪ್ರದರ್ಶಿಸುತ್ತಾ ಸಂಗಮ ಪ್ರದೇಶದಲ್ಲಿ ಚೈತನ್ಯ ತುಂಬಿದ ಸಾಧುಗಳು

*ಬೆಳಗಿನ ಜಾವ 3ರ ‘ಬ್ರಾಹ್ಮಿ ಮುಹೂರ್ತ’ದಿಂದ ‘ಅಮೃತ ಸ್ನಾನ’ ಆರಂಭ

*ವಿದೇಶದಿಂದ ಬಂದ ಭಕ್ತರೂ ಸ್ನಾನದಲ್ಲಿ ಭಾಗಿ

*ಯಾವುದೇ ಅಹಿತಕರ ಘಟನೆ ನಡೆಯದೆ, ಸುಸೂತ್ರವಾಗಿ ನಡೆದ ಪವಿತ್ರ ಸ್ನಾನ

ಹೂಮಳೆ...

ಮಹಾಕುಂಭದಲ್ಲಿ ಭಕ್ತರು ಮಂಗಳವಾರ ‘ಅಮೃತ ಸ್ನಾನ’ ಮಾಡುವ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಹೂಮಳೆ ಸುರಿಸಲಾಯಿತು. 

ಭಕ್ತರ ಮೇಲೆ ಗುಲಾಬಿಯ ದಳಗಳ ಸುರಿಮಳೆಯಾಗುತ್ತಿದ್ದಂತೆಯೇ ಅವರು ‘ಜೈ ಶ್ರೀ ರಾಮ್‘, ‘ಹರಹರ ಮಹಾದೇವ’ ಎಂದು ಘೋಷಣೆ ಮೊಳಗಿಸಿದರು.

‘ಯೋಗಿ ಆದಿತ್ಯನಾಥ ಸರ್ಕಾರದ ನಿರ್ದೇಶನದಂತೆ ತೋಟಗಾರಿಕೆ ಇಲಾಖೆಯು ಮಹಾಕುಂಭ ಮೇಳದಲ್ಲಿ ಪುಷ್ಪವೃಷ್ಟಿಗಾಗಿ ಒಂದು ವಾರದಿಂದ ಸಿದ್ಧತೆ ನಡೆಸಿದೆ. ಸ್ನಾನದ ಸಂದರ್ಭದಲ್ಲಿ ತಡೆರಹಿತವಾಗಿ ಹೂಮಳೆ ಸುರಿಸಲು ಬೇಕಾದಷ್ಟು ಗುಲಾಬಿಯ ಎಸಳುಗಳನ್ನು ಸಂಗ್ರಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. 

ಸೋಲಾಪುರ ಮಾಜಿ ಮೇಯರ್‌ ನಿಧನ

ಪುಣೆ: ಮಹಾರಾಷ್ಟ್ರದ ಸೋಲಾಪುರದ ಮಾಜಿ ಮೇಯರ್, ಎನ್‌ಸಿಪಿ (ಶರದ್‌ ಪವಾರ್‌ ಬಣ) ಮುಖಂಡ ಮಹೇಶ್‌ ಕೋಠೆ (60) ಅವರು ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಬೆಳಿಗ್ಗೆ 7.30ಕ್ಕೆ ಈ ಘಟನೆ ನಡೆದಿದೆ.

‘ಸ್ನಾನಕ್ಕಾಗಿ ನೀರಿಗಿಳಿದ ಸಂದರ್ಭದಲ್ಲೇ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟರು’ ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.