ADVERTISEMENT

ಎನ್‌ಡಿಎಗೆ ಹಿಂದಿನ ಗೆಲುವಿನ ಆತ್ಮವಿಶ್ವಾಸ

ಮುಂಬೈ ಮಹಾನಗರದ 36 ಕ್ಷೇತ್ರಗಳು: ಎಲ್ಲ ಪಕ್ಷಗಳಿಗೂ ಇವೆ ಸವಾಲುಗಳು

ಮೃತ್ಯುಂಜಯ ಬೋಸ್
Published 17 ಅಕ್ಟೋಬರ್ 2019, 10:10 IST
Last Updated 17 ಅಕ್ಟೋಬರ್ 2019, 10:10 IST
   

ಮುಂಬೈ: 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ 36 ಕ್ಷೇತ್ರಗಳು ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿವೆ. ಇದು ಒಟ್ಟು ಸದಸ್ಯ ಬಲದ ಶೇ 12ರಷ್ಟು. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮಗ ಆದಿತ್ಯ ಠಾಕ್ರೆ ಮಹಾನಗರದ ವರ್ಲಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇದು ಮಹಾನಗರದ ಹಣಾಹಣಿ ಬಗೆಗಿನ ಆಸಕ್ತಿ ಹೆಚ್ಚಿಸಿದೆ. ಪಿಎಂಸಿ ಬ್ಯಾಂಕ್‌ ಹಗರಣ, ಮೆಟ್ರೊ ತಂಗುದಾಣಕ್ಕಾಗಿ ಆರೆ ಕಾಲೊನಿಯಲ್ಲಿ ಮರಗಳ ಹನನ ಮುಂತಾದ ವಿಚಾರಗಳು ಚುನಾವಣೆಯನ್ನು ಮತ್ತಷ್ಟು ಕುತೂಹಲಕಾರಿ ಆಗಿಸಿವೆ. ಕಳೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ–ಶಿವಸೇನಾ ಗೆದ್ದಿವೆ. ಈ ಬಾರಿಯೂ ಆ ಫಲಿತಾಂಶವನ್ನು ಪುನರಾವರ್ತಿಸುವ ವಿಶ್ವಾಸ ಈ ಮೈತ್ರಿಕೂಟಕ್ಕೆ ಇದೆ.

ಎಲ್ಲ ರೀತಿಯ ಜನರೂ ಇರುವ ನಗರ ಮುಂಬೈ. ಮಲಬಾರ್‌ ಹಿಲ್‌ ಮತ್ತು ಕೊಲಾಬಾದಂತಹ ಪ್ರತಿಷ್ಠಿತ ಪ್ರದೇಶಗಳು, ಕೊಳೆಗೇರಿಗಳು ಹೆಚ್ಚಾಗಿರುವ ಧಾರಾವಿ ಮತ್ತು ಮನ್‌ಕುರ್ದ್‌ ಶಿವಾಜಿನಗರ, ಸದಾ ಚಟುವಟಿಕೆಯಿಂದ ಗಿಜಿಗುಟ್ಟುವ ಅಂಧೇರಿ, ಬಾಂದ್ರಾದಂತಹ ಉಪನಗರಗಳು, ನಗರದಾದ್ಯಂತ ವ್ಯಾಪಿಸಿರುವ ಮಧ್ಯಮ ವರ್ಗದ ಕಾಲೊನಿಗಳು ಇಲ್ಲಿ ಇವೆ. ಹಾಗಾಗಿಯೇ, ಚುನಾವಣಾ ಕಣದ ವಿಶ್ಲೇಷಣೆ ಹೆಚ್ಚು ಸಂಕೀರ್ಣವಾಗಿದೆ.

ವರ್ಲಿಯ ಶಾಸಕ ಸುನಿಲ್‌ ಶಿಂಧೆ ಅವರು ತಮ್ಮ ಕ್ಷೇತ್ರವನ್ನು ಸೇನಾದ ‘ಯುವರಾಜ’ನಿಗೆ ಬಿಟ್ಟುಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸುನಿಲ್‌ ಅವರಿಗೆ ಭಾರಿ ಸ್ಪರ್ಧೆ ಒಡ್ಡಿದ್ದ ಸಚಿನ್‌ ಅಹಿರ್‌ ಈಗ ಸೇನಾಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ, ಗೆಲುವಿಗೆ ಭಾರಿ ಬೆವರು ಹರಿಸುವ ಅಗತ್ಯ ಆದಿತ್ಯ ಅವರಿಗೆ ಇಲ್ಲ.

ADVERTISEMENT

ಸಚಿವ ವಿನೋದ್‌ ತಾವಡೆ (ಬೊರಿವಿಲಿ), ಮಾಜಿ ಸಚಿವರಾದ ಪ್ರಕಾಶ್‌ ಮೆಹ್ತಾ (ಘಾಟ್‌ಕೋಪರ್‌ ಪೂರ್ವ) ಮತ್ತು ರಾಜ್‌ ಪುರೋಹಿತ್ (ಕೊಲಾಬಾ) ಅವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ಈ ಮೂವರೂ ಪ್ರಭಾವಿ ಸಮುದಾಯಗಳ ನಾಯಕರು. ಮೆಹ್ತಾ ಅವರುಗುಜರಾತಿ ಮತ್ತು ಪುರೋಹಿತ್‌ ಅವರು ಮಾರ್ವಾಡಿ ಸಮುದಾಯಗಳ ನಾಯಕರಾದರೆ, ತಾವಡೆ ಮರಾಠ ಸಮುದಾಯದವರು. ಹಾಗಾಗಿ, ಇವರನ್ನು ಕೈಬಿಟ್ಟಿರುವುದರಿಂದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ಗೆ ದೊಡ್ಡ ಸವಾಲು ಎದುರಾಗಿದೆ.

ಮಹಾನಗರದ ಮೂಲಸೌಕರ್ಯವನ್ನು ಉತ್ತಮಪಡಿಸಲು ರಾಜ್ಯ ಸರ್ಕಾರ ಮತ್ತು ಬೃಹನ್‌ ಮುಂಬೈ ಮಹಾನಗರಪಾಲಿಕೆ ಸಾಕಷ್ಟು ಪ್ರಯತ್ನ ನಡೆಸಿವೆ.ಆದರೆ, ಮುಂಗಾರು ಋತುವಿನಲ್ಲಿ ಸಮಸ್ಯೆಗಳು ಸಾಮಾನ್ಯ. ಈ ಬಾರಿಯೂ ಮಹಾನಗರವು ಮಳೆಗೆ ತತ್ತರಿಸಿದೆ. ಉಪನಗರ ರೈಲು ಜಾಲಕ್ಕಿಂತ ದೊಡ್ಡದಾದ ಮೆಟ್ರೊ ಜಾಲ ರೂಪಿಸುವುದಕ್ಕೆ ಫಡಣವೀಸ್‌ ಒತ್ತು ನೀಡಿದ್ದಾರೆ. ಆದರೆ, ಅದಕ್ಕಾಗಿ ಆರೆ ಕಾಲೊನಿಯಲ್ಲಿನ ಮರಗಳನ್ನು ಕಡಿಯುವ ನಿರ್ಧಾರಕ್ಕೆ ತೀವ್ರ ಪ್ರತಿರೋಧ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.