ADVERTISEMENT

‘ಸುವರ್ಣ ತ್ರಿಕೋನ’ ನಿರ್ಣಾಯಕ

ಮೃತ್ಯುಂಜಯ ಬೋಸ್
Published 17 ಅಕ್ಟೋಬರ್ 2019, 10:00 IST
Last Updated 17 ಅಕ್ಟೋಬರ್ 2019, 10:00 IST
   

ಮುಂಬೈ: ಮಹಾರಾಷ್ಟ್ರದ ಮುಂದಿನ ಸರ್ಕಾರ ಯಾರು ರಚಿಸಬೇಕು ಎಂಬ ವಿಚಾರದಲ್ಲಿ ನಿರ್ಣಾಯಕವಾಗಿರುವುದು ಇಲ್ಲಿನ ಸುವರ್ಣ ತ್ರಿಕೋನ. ಮುಂಬೈ, ಬೃಹನ್‌ ಮುಂಬೈ ಮಹಾನಗರಪಾಲಿಕೆ ಪ್ರದೇಶ ಮತ್ತು ಪುಣೆ ಹಾಗೂ ನಾಸಿಕ್‌ನ ನಗರ ಪ್ರದೇಶವನ್ನು ಸುವರ್ಣ ತ್ರಿಕೋನ ಎಂದು ಕರೆಯಲಾಗುತ್ತದೆ.

ಈ ಪ್ರದೇಶದಲ್ಲಿ 14 ಲೋಕಸಭಾ ಕ್ಷೇತ್ರಗಳು ಮತ್ತು ಸುಮಾರು 85 ವಿಧಾನಸಭಾ ಕ್ಷೇತ್ರಗಳಿವೆ.

ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಪ್ರಾಬಲ್ಯ ಇತ್ತು. ಈಗ, ಬಿಜೆಪಿ–ಶಿವಸೇನಾ ಮೈತ್ರಿಕೂಟದ ಕೈ ಮೇಲಾಗಿದೆ. ಈ ಭಾಗದ ಹೆಚ್ಚಿನ ನಗರಪಾಲಿಕೆಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಬಿಜೆಪಿ ಆಳ್ವಿಕೆಯೇ ಇದೆ.

ADVERTISEMENT

2014ರ ವಿಧಾನಸಭೆ ಹಾಗೂ 2014 ಮತ್ತು 2019ರ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಗಮನದಲ್ಲಿ ಇರಿಸಿಕೊಂಡು ಹೇಳುವು ದಾದರೆ ಈ ಪ್ರದೇಶ ಬಿಜೆಪಿ–ಸೇನಾ ಮೈತ್ರಿಕೂಟದ ನಿಯಂತ್ರಣದಲ್ಲಿ ಇದೆ. ‘ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ ಅತಿ ದೊಡ್ಡ ಕೊಡುಗೆ ನೀಡುವ ಪ್ರದೇಶ ಇದು. ಈ ಪ್ರದೇಶದ ಬಹುಭಾಗವು ನಗರಗಳಿಂದಲೇ ಕೂಡಿದೆ. ಬಹುದೊಡ್ಡ ವಲಸಿಗ ಸಮುದಾಯವೂ ಇಲ್ಲಿ ಇದೆ. ಶ್ರೀಮಂತರು ಮತ್ತು ಕಡು ಬಡವರು ಇದ್ದಾರೆ. ಜತೆಗೆ, ಅತ್ಯಂತ ದೊಡ್ಡ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವೂ ಇಲ್ಲಿದೆ’ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಯೂ ಇಲ್ಲಿ ಗಣನೀಯವಾಗಿದೆ. ಕೆಲವು ಕ್ಷೇತ್ರಗಳು ಈ ಸಮುದಾಯಗಳಿಗೆ ಮೀಸಲಾಗಿವೆ. ಗ್ರಾಮೀಣ ಪ್ರದೇಶ, ಅರಣ್ಯ ಪ್ರದೇಶ, ದೊಡ್ಡ ಸರೋವರಗಳು, ಮತ್ತು ಮೀನುಗಾರಿಕಾ ವಲಯವನ್ನು ಈ ಪ್ರದೇಶ ಒಳಗೊಂಡಿದೆ.

‘ದೊಡ್ಡ ಪ್ರಮಾಣದ ವ್ಯಾಪಾರಿ ಸಮುದಾಯ ಹಾಗೂ ಮಧ್ಯಮ ವರ್ಗವು ಇಲ್ಲಿ ಭಾರಿ ಪ್ರಭಾವ ಬೀರಲಿದೆ. ಇಲ್ಲಿನ ಜನರ ನಿರೀಕ್ಷೆಗಳು ಅತಿ ಎತ್ತರದಲ್ಲಿವೆ’ ಎಂದು ವಸಾಯ್‌ಯ ಹೋರಾಟಗಾರ ಸಿದ್ಧಿ ಧಮನೆ ಹೇಳುತ್ತಾರೆ.

ಮೆಟ್ರೊ ಜಾಲ ವಿಸ್ತರಣೆಯೂ ಸೇರಿದಂತೆ ಹಿಂದಿನ ಕಾಂಗ್ರೆಸ್‌– ಎನ್‌ಸಿಪಿ ಸರ್ಕಾರವು ಈ ಭಾಗದಲ್ಲಿ ರೂಪಿಸಿದ್ದ ಅನೇಕ ಯೋಜನೆಗಳ ವೇಗ ವರ್ಧನೆಗೆ ಈಗಿನ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿದೆ.

ಅಷ್ಟೇ ಅಲ್ಲ ನಾಸಿಕ್‌ ಮತ್ತು ಪುಣೆ ನಗರಗಳ ಅಭಿವೃದ್ಧಿಗೂ ಅನೇಕ ಕ್ರಮಗಳನ್ನು ಕೈಗೊಂಡಿದೆ. 2024ರ ವೇಳೆಗೆ ಎಂಎಂಆರ್‌ ವ್ಯಾಪ್ತಿಯಲ್ಲಿ 325 ಕಿ.ಮೀ.ಗೂ ಹೆಚ್ಚು ಮೆಟ್ರೊ ರೈಲು ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮುಖ್ಯ ಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ಮೂಲಸೌಲಭ್ಯ ಕ್ಷೇತ್ರದಲ್ಲಿ ತಡೆರಹಿತವಾದ ಅಭಿವೃದ್ಧಿಯನ್ನು ದಾಖಲಿಸುವ ಉದ್ದೇಶದಿಂದ ಎಂಎಂ ಆರ್‌ನ ವ್ಯಾಪ್ತಿಯನ್ನು ಸಹ ಹೆಚ್ಚಿಸಲಾಗಿದೆ. ಮೆಟ್ರೊ ವಿಚಾರದಲ್ಲಿ ಬಿಜೆಪಿಗೆ ತನ್ನ ಮಿತ್ರಪಕ್ಷ ಶಿವಸೇನಾ ತಡೆ ಒಡ್ಡಿದೆ. ಆರೇ ಕಾಲೋನಿಯಲ್ಲಿ ಮೆಟ್ರೊ ಬೋಗಿ ನಿರ್ಮಾಣ ಘಟಕ ಸ್ಥಾಪನೆಯ ವಿಚಾರದಲ್ಲಿ ಶಿವಸೇನಾ ಸಹ ಪರಿಸರವಾದಿಗಳು, ಕಾಂಗ್ರೆಸ್‌, ಎನ್‌ಸಿಪಿ ಪ್ರತಿಭಟನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.