ADVERTISEMENT

ಅಳಿಸಿಹೋಗುತ್ತಿದೆ ಶಾಯಿ,ಇವಿಎಂನಲ್ಲಿ ತಾಂತ್ರಿಕ ದೋಷ: ವಿವಾದದಲ್ಲಿ ‘ಮಹಾ’ ಚುನಾವಣೆ

ಪಿಟಿಐ
Published 15 ಜನವರಿ 2026, 15:26 IST
Last Updated 15 ಜನವರಿ 2026, 15:26 IST
   

ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಲವು ಅವ್ಯವಹಾರಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮತದಾರರ ಬೆರಳಿಗೆ ಮಾರ್ಕರ್‌ನಲ್ಲಿ ಹಾಕಿರುವ ಶಾಯಿಯನ್ನು ಹಲವರು ಅಸಿಟೋನ್ ಬಳಸಿ ಅಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. 

ಬೃಹನ್‌ಮುಂಬೈ ಮಹಾನಗರ ಪಾಲಿಕೆಯೂ (ಬಿಎಂಸಿ) ಸೇರಿದಂತೆ ರಾಜ್ಯದ 29 ನಗರ ಪಾಲಿಕೆಗಳಲ್ಲಿ ಗುರುವಾರ ಮತದಾನ ನಡೆದಿದ್ದು, ಶೇ41ರಷ್ಟು ಮತಗಳು ಚಲಾವಣೆಯಾಗಿವೆ. 

ಈ ನಡುವೆಯೇ ಹಲವು ವಾರ್ಡ್‌ಗಳಲ್ಲಿ ಮತದಾನದ ಬಳಿಕ ಬೆರಳಿಗೆ ಹಾಕಿರುವ ಶಾಯಿಯನ್ನು ಸಾಮಾನ್ಯ ಮತದಾರರು, ರಾಜಕಾರಣಿಗಳು ಹಾಗೂ ಕೆಲವು ಮಾಧ್ಯಮ ಪ್ರತಿನಿಧಿಗಳು ಅಸಿಟೋನ್‌ನಿಂದ ಅಳಿಸಬಹುದು ಎಂಬುದನ್ನು ತೋರಿಸಿದ್ದಾರೆ. ಈ ವಿಡಿಯೊ ಹರಿದಾಡುತ್ತಿದ್ದಂತೆಯೇ ಪ್ರತಿಪಕ್ಷಗಳಿಂದ ಚುನಾವಣಾ ಪ್ರಕ್ರಿಯೆಯ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. 

ADVERTISEMENT

‘ಶಾಯಿ ಅಳಿಸಬಹುದು ಎಂದು ನನ್ನ ಸಹೋದ್ಯೋಗಿಗಳೇ ನಿರೂಪಿಸಿದ್ದಾರೆ’ ಎಂದು ನೈಲ್‌ ಪಾಲಿಶ್‌ ರಿಮೂವರ್‌ ಬಳಸಿ ಅಳಿಸಿಹಾಕುತ್ತಿರುವ ವಿಡಿಯೊವನ್ನು ಮುಂಬೈ ಕಾಂಗ್ರೆಸ್‌ ನಾಯಕಿ ವರ್ಷಾ ಗಾಯಕ್ವಾಡ್‌ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಇದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿರುವುದ ಮಾತ್ರವಲ್ಲದೇ, ಬಿಎಂಸಿ, ರಾಜ್ಯ ಚುನಾವಣಾ ಆಯೋಗದ (ಎಸ್‌ಇಸಿ)  ಹೊಣೆಗಾರಿಕೆಯ ಬಗ್ಗೆಯೂ ‍ಪ್ರತಿಪಕ್ಷಗಳು ಕಿಡಿಕಾರಲು ಕಾರಣವಾಗಿದೆ. 

ತಾಂತ್ರಿಕ ದೋಷ: ಪುಣೆ ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿ ಮತದಾನ ಶುರುವಾಗುತ್ತಿದ್ದಂತೆಯೇ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. 15ರಿಂದ 20 ಇವಿಎಂಗಳಲ್ಲಿ ಈ ಸಮಸ್ಯೆ ಎದುರಾಗಿದ್ದು, ಅವುಗಳನ್ನು ತಕ್ಷಣವೇ ಬದಲಿಸಲಾಗಿದೆ ಎಂದು ಚುನಾವಣಾ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದರಲ್ಲಿಯೂ ಅಕ್ರಮ ಎಸಗಲಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ರೋಹಿತ್‌ ಪವಾರ್‌ ಆರೋಪಿಸಿದ್ದಾರೆ. 

‘ತನಿಖೆ ನಡೆಸಲಾಗುತ್ತಿದೆ’

ಮತದಾರರ ಬೆರಳಿನ ಶಾಯಿ ಅಳಿಸಿಹಾಕಿರುವ ವಿಡಿಯೊ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ತಪ್ಪಾದ ಮಾಹಿತಿ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಇಸಿ ಕಮಿಷನರ್ ದಿನೇಶ್ ವಾಗ್ಮರೆ ಹೇಳಿದ್ದಾರೆ. ಶಾಯಿ ಒಣಗಲು ಸ್ವಲ್ಪ ಸಮಯ ಬೇಕಾಗುತ್ತದೆ, ಅದನ್ನು ಅಳಿಸಿಹಾಕಬಾರದು. ಕೊರೆಸ್ ಕಂಪನಿಯ ಶಾಯಿಯನ್ನು 2011ರಿಂದಲೂ ಬಳಕೆ ಮಾಡಲಾಗುತ್ತಿದೆ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. 

ಇದೇ ವೇಳೆ, ‘ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಸಂರ್ಭದಲ್ಲಿ ಯಾವ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದೆವೋ ಅಲ್ಲಿ ಈ ಬಾರಿ ತಮ್ಮ ಹೆಸರು ಕಾಣಿಸುತ್ತಿಲ್ಲ’ ಎಂದು ಹಲವರು ದೂರಿರುವ ಬಗ್ಗೆಯೂ ದಿನೇಶ್‌ ‍ಪ್ರತಿಕ್ರಿಯಿಸಿದ್ದಾರೆ. 

ಎರಡು ಗುಂಪುಗಳ ನಡುವೆ ಘರ್ಷಣೆ : ಇವಿಎಂ ಧ್ವಂಸ

ಮಹಾರಾಷ್ಟ್ರದ ಧುಲೆ ಎಂಬಲ್ಲಿ ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳ ನಾಯಕರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ವಾರ್ಡ್‌ 18ರ ಮತಗಟ್ಟೆಗೆ ನುಗ್ಗಿದ ಎರಡೂ ಗುಂಪುಗಳ ಬೆಂಬಲಿಗರು ಇವಿಎಂ ಧ್ವಂಸಗೊಳಿಸಿದ್ದಾರೆ. ಘಟನೆಯಿಂದಾಗಿ ಒಂದೂವರೆ ಗಂಟೆ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಬಳಿಕ ಹೊಸ ಇವಿಎಂ ಅಳವಡಿಸಿ, ಪ್ರಕ್ರಿಯೆ ಮುಂದುವರಿಸಲಾಗಿದೆ. ಘಟನೆ ಸಂಬಂಧಿಸಿದಂತೆ ಪ್ರಕರಣಗಳ ದಾಖಲಿಸುವುದಾಗಿ ‍ಪೊಲೀಸರು ತಿಳಿಸಿದ್ದಾರೆ. 

ಉಮೇದುವಾರಿಕೆ ಹಿಂಪಡೆಯುವ ವಿಚಾರವಾಗಿ ಶಿವಸೇನೆ ನಾಯಕ ಮನೋಜ್‌ ಮೋರ್‌ ಹಾಗೂ ಬಿಜೆಪಿ ನಾಯಕ ವಿಲಾಸ್‌ ಶಿಂದೆ ಅವರ ಬೆಂಬಲಿಗರ ನಡುವೆ ಬುಧವಾರದಿಂದಲೂ ಗಲಾಟೆ ನಡೆಯುತ್ತಿತ್ತು. ಬುಧವಾರ 20 ಮಂದಿ ಮನೋಜ್‌ ಅವರ ನಿವಾಸಕ್ಕೆ ಕಲ್ಲು ತೂರಿ, ವಾಹನಗಳನ್ನೂ ಜಖಂಗೊಳಿಸಲು ಯತ್ನಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.