ADVERTISEMENT

ಸಂಪೂರ್ಣ ಕೃಷಿ ಸಾಲಮನ್ನಾ: ಉದ್ಧವ್ ಠಾಕ್ರೆ ಭರವಸೆ

ಏಜೆನ್ಸೀಸ್
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಪುಣೆ: ಮಹಾರಾಷ್ಟ್ರದಲ್ಲಿ ಸಂಪೂರ್ಣ ಕೃಷಿ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಭರವಸೆ ನೀಡಿದ್ದಾರೆ.

ಶಿವಸೇನಾ ನೇತೃತ್ವದ ಸರ್ಕಾರ ಔಪಚಾರಿಕವಾಗಿ ಸಾಲಮನ್ನಾ ಯೋಜನೆಗೆ ಅನುಮೋದನೆ ನೀಡಿದ ಒಂದು ದಿನದ ಬಳಿಕೆ ಠಾಕ್ರೆ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ವಸಂತದಾದಾ ಸಕ್ಕರೆ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಸಾಲಮನ್ನಾ ಕುರಿತು ಮಾತನಾಡಿದರು. ಈ ವೇಳೆ ಎನ್‌ಸಿಪಿಯ ಅಧ್ಯಕ್ಷ ಹಾಗೂ ವಸಂತದಾದಾದಾ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರೂ ಆಗಿರುವ ಶರದ್ ಪವಾರ್ ಉಪಸ್ಥಿತರಿದ್ದರು.

ADVERTISEMENT

‘2015ರ ಏಪ್ರಿಲ್ 1ರಿಂದ 2019ರ ಡಿಸೆಂಬರ್ 31ರೊಳಗೆ ₹ 2 ಲಕ್ಷದ ತನಕದ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಲಾಗುವುದು. ಅಂತೆಯೇ 2019ರ ಸೆಪ್ಟೆಂಬರ್ 30ರೊಳಗಿನ ಅಲ್ಪಾವಧಿಯ ಬೆಳೆ ಸಾಲವನ್ನೂ ಮನ್ನಾ ಮಾಡಲಾಗುವುದು. ನಾವು ₹ 2 ಲಕ್ಷ ತನಕ ರೈತ ಪಡೆದಿರುವ ಸಾಲವನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮನ್ನಾ ಮಾಡಿದ್ದೇವೆ. ಹಾಗೆಯೇ ಒಟ್ಟಾರೆ ಬೆಳೆ ಸಾಲವನ್ನು ಮನ್ನಾ ಮಾಡಿರುವುದನ್ನೂ ನಾವು ಖಚಿತಪಡಿಸುತ್ತೇವೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

‘ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಮಾತ್ರ ಏಕೈಕ ಅತಿದೊಡ್ಡ ಪಕ್ಷವಾಗಿದೆ ಎನ್ನುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಹೇಳಿಕೆಯನ್ನು ಅಲ್ಲಗಳೆದ ಉದ್ಧವ್ ಠಾಕ್ರೆ, ಕೃಷಿ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬೇಕು ಮತ್ತು ಶಾಸಕಾಂಗದಲ್ಲಿ ಕಡಿಮೆ ಶಾಸಕರಿರುವ ಸರ್ಕಾರವನ್ನು ಹೇಗೆ ರಚಿಸಬೇಕೆಂದು ನಮಗೆ ಶರದ್ ಪವಾರ್ ಅವರು ಕಲಿಸಿಕೊಟ್ಟಿದ್ದಾರೆ’ ಎಂದರು.

ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಜತೆಗೂಡಿ ಸ್ಪರ್ಧಿಸಿದ್ದವು. ಆದರೆ, ಸೇನಾ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ ನಂತರ ಬಿಜೆಪಿಯ ಮೈತ್ರಿ ಕುಸಿಯಿತು. ನಂತರ ಮೂರೂ ಪಕ್ಷಗಳು ನವೆಂಬರ್ ಅಂತ್ಯದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.