ADVERTISEMENT

ಬೆಳಗಾವಿಯಲ್ಲಿ ಎಂಇಎಸ್‌ ಸೋತಿರುವುದು ದುರದೃಷ್ಟಕರ: ಸಂಜಯ್ ರಾವುತ್‌

ಪಿಟಿಐ
Published 7 ಸೆಪ್ಟೆಂಬರ್ 2021, 6:06 IST
Last Updated 7 ಸೆಪ್ಟೆಂಬರ್ 2021, 6:06 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ನೆರೆಯ ಕರ್ನಾಟಕದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಪರಾಭವಗೊಂಡಿರುವುದು ದುರದೃಷ್ಟಕರ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮರಾಠಿ ಅಭ್ಯರ್ಥಿಗಳನ್ನು ಸೋಲಿಸಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಚುನಾವಣೆ ಫಲಿತಾಂಶದಿಂದ ಸಂಭ್ರಮಿಸುತ್ತಿರುವುದನ್ನು ಟೀಕಿಸಿರುವ ಸಂಜಯ್‌, ‘ಇದು ಮರಾಠಿಗರಿಗೆ ಮಾಡಿರುವ ದ್ರೋಹ‘ ಎಂದು ಆರೋಪಿಸಿದ್ದಾರೆ.

‘ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್‌, ‘ಬೆಳಗಾವಿಯಲ್ಲಿ ಮರಾಠಿ ಅಭ್ಯರ್ಥಿಗಳನ್ನು ಸೋಲಿಸಲು ಕರ್ನಾಟಕ ಸರ್ಕಾರ ಸಂಚು ರೂಪಿಸಿತು. ಇದರಿಂದಾಗಿ ಅಭ್ಯರ್ಥಿಗಳು ನಗರದ ಮೇಲಿನ ಹಿಡಿತವನ್ನು ಕಳೆದುಕೊಂಡಂತಾಗಿದೆ‘ ಎಂದು ಹೇಳಿದರು.

ADVERTISEMENT

‘ಪಾಲಿಕೆ ಚುನಾವಣೆಯಲ್ಲಿ ನಿಮ್ಮ ಪಕ್ಷ ಗೆದ್ದರೂ ಪರವಾಗಿಲ್ಲ, ಆದರೆ, ನೀವು ಮರಾಠಿ ಅಭ್ಯರ್ಥಿಗಳ ಸೋಲಿಗೆ ಖುಷಿಪಡುತ್ತಿದ್ದೀರಿ. ನಿಮಗೆ ನಾಚಿಕೆಯಾಗುತ್ತಿಲ್ಲವೇ?‘ ಎಂದು ಪ್ರಶ್ನಿಸಿದರು. ‘ಇಂಥ ದ್ರೋಹವನ್ನು ನಾನು ಹಿಂದೆಂದೂ ನೋಡಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಬೆಳಗಾವಿಯಲ್ಲಿ ಮರಾಠಿಯ ಆತ್ಮಾಭಿಮಾನ ಮತ್ತು ಸ್ವಾಭಿಮಾನಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ‘ ಎಂದು ನೆನಪಿಸಿದರು.

ಬೆಳಗಾವಿಯ ಮಹಾನಗರ ಪಾಲಿಕೆಯ 58 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲು ಬೇಕಾಗುವಷ್ಟು ಪೂರ್ಣ ಬಹುಮತ ಪಡೆದಿದೆ. ಕಾಂಗ್ರೆಸ್ –10 ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಪಕ್ಷ ಒಂದು ಸ್ಥಾನ ಹಾಗೂ ಪಕ್ಷೇತರರು 12 ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಶೂನ್ಯ ಸಂಪಾದನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.