ADVERTISEMENT

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಪ್ರಕರಣ: ಆರೋಪಿಗೆ ಎರಡು ವರ್ಷ ಜೈಲು

ಪಿಟಿಐ
Published 9 ಮಾರ್ಚ್ 2021, 10:02 IST
Last Updated 9 ಮಾರ್ಚ್ 2021, 10:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಠಾಣೆ: ಜಿಲ್ಲಾ ನ್ಯಾಯಾಧೀಶರೊಬ್ಬರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇರೆಗೆ 35 ವರ್ಷದ ವಿಚಾರಣಾಧೀನ ಕೈದಿಯೊಬ್ಬರಿಗೆ ಎರಡು ವರ್ಷಗಳ ಕಠಿಣ ಸಜೆ ವಿಧಿಸಲಾಗಿದೆ.

ಐಪಿಸಿ ಸೆಕ್ಷನ್‌ 353 (ಸರ್ಕಾರಿ ಅಧಿಕಾರಿಯನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ) ಮತ್ತು 294 (ಅಶ್ಲೀಲ ಪದಗಳ ಬಳಕೆ) ಅಡಿಯಲ್ಲಿ ವಿಚಾರಣಾಧೀನ ಕೈದಿ ಗಣೇಶ್‌ ಲಕ್ಷ್ಮಣ್‌ಗೆ ಎರಡು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ಜಿಲ್ಲಾ ನ್ಯಾಯಾಧೀಶ ಪಿ.ಎಂ. ಗುಪ್ತಾ ಅವರು ಮಾರ್ಚ್‌ 5ರಂದು ಆದೇಶಿಸಿದ್ದಾರೆ. ಆದೇಶ ಪ್ರತಿ ಸೋಮವಾರ ಲಭ್ಯವಾಗಿದೆ.

‘ನವೀ ಮುಂಬೈನ ಕಾರ್ಮಿಕ ಗಣೇಶ್‌, ಠಾಣೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ. 2019ರ ಜೂನ್‌ 28ರಂದು ಅವರನ್ನು ವಿಚಾರಣೆ ಸಲುವಾಗಿ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್‌ ನ್ಯಾಯಾಧೀಶರಾದ ಆರ್‌.ಎಸ್‌. ಗುಪ್ತಾ ಅವರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ತನಗೆ ಒದಗಿಸಿದ ವಕೀಲರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂಬುದನ್ನು ಈ ವೇಳೆ ಆರೋಪಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಆಗ ನ್ಯಾಯಾಧೀಶರು, ತಮಗೆ ಇನ್ನೊಬ್ಬರು ವಕೀಲರನ್ನು ನಿಯೋಜಿಸುತ್ತೇವೆ ಮತ್ತು ವಿಚಾರಣೆಯನ್ನು ಇನ್ನೊಂದು ದಿನ ಮಾಡುತ್ತೇವೆ ಎಂದು ಹೇಳಿದರು. ಆಗ ಈ ಆರೋಪಿ ತನ್ನ ಚಪ್ಪಲಿಯನ್ನು ನ್ಯಾಯಾಧೀಶರ ಮೇಲೆ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿದರು’ ಎಂದು ಸರ್ಕಾರಿ ವಕೀಲರಾದ ಎಸ್‌.ಎಂ. ದಾಂಡೇಕರ್‌ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.‌

ADVERTISEMENT

ಆರೋಪಿ ಮಾಡಿದ ಅಪರಾಧ ಗಂಭೀರವಾದದ್ದು. ಇದು ಯಾವುದೇ ರೀತಿಯ ಸಹಾನುಭೂತಿಗೆ ಅರ್ಹವಾಗಿಲ್ಲ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.