ADVERTISEMENT

ಓಡಿ ಹೋಗಿ ಮದುವೆಯಾದ ಸೋದರ ಸೊಸೆ; ಆರತಕ್ಷತೆ ವೇಳೆ ಊಟಕ್ಕೆ ವಿಷ ಬೆರೆಸಿದ ಮಾವ!

ಪಿಟಿಐ
Published 8 ಜನವರಿ 2025, 10:35 IST
Last Updated 8 ಜನವರಿ 2025, 10:35 IST
ಮದುವೆ
ಮದುವೆ   ಪ್ರಾತಿನಿಧಿಕ ಚಿತ್ರ

ಕೊಲ್ಹಾಪುರ: ಸಹೋದರಿಯ ಮಗಳು (ಸೋದರ ಸೊಸೆ) ತನ್ನ ಒಪ್ಪಿಗೆ ಪಡೆಯದೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ, ಆರತಕ್ಷತೆ ಸಮಾರಂಭದ ವೇಳೆ ಅತಿಥಿಗಳಿಗೆ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಅದೃಷ್ಟವಶಾತ್, ವಿಷ ಬೆರೆಸಿದ ಆಹಾರವನ್ನು ಯಾರೂ ಸೇವಿಸಿಲ್ಲ. ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ, ತಲೆಮರೆಸಿಕೊಂಡಿದ್ದಾನೆ. ಪನ್ಹಾಲ ತಾಲ್ಲೂಕಿನ ಉತ್ರೆ ಎಂಬ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕೆಲವರು ಆತನನ್ನು ಹಿಡಿಯಲು ಯತ್ನಿಸಿದರೂ, ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದಿದ್ದಾರೆ.

'ಆರೋಪಿಯನ್ನು ಉತ್ರೆ ಗ್ರಾಮದ ಮಹೇಶ್‌ ಪಾಟೀಲ್‌ ಎಂದು ಗುರುತಿಸಲಾಗಿದೆ. ವಧುವಿನ ತಾಯಿಯ ಸಹೋದರನಾಗಿರುವ ಆತನ ವಿರುದ್ಧ, ಜನರ ಜೀವಕ್ಕೆ ಅಪಾಯವೊಡ್ಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪನ್ಹಾಲ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಕೊಂಡುಭಾಯಿರಿ ತಿಳಿಸಿದ್ದಾರೆ.

ADVERTISEMENT

ಪೊಲೀಸರ ಮಾಹಿತಿ ಪ್ರಕಾರ, ವಧು ಆರೋಪಿಯ ಮನೆಯಲ್ಲೇ ಬೆಳೆದಿದ್ದಳು ಎನ್ನಲಾಗಿದೆ.

'ಇತ್ತೀಚೆಗೆ ಮನೆಬಿಟ್ಟು ಹೋಗಿದ್ದ ವಧು, ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಳು. ಇದರಿಂದ ಪಾಟೀಲ್‌ ಕೆರಳಿದ್ದ. ಮದುವೆ ಹಿನ್ನೆಲೆಯಲ್ಲಿ ದಂಪತಿ, ಆರತಕ್ಷತೆ ಏರ್ಪಡಿಸಿದ್ದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಆತ, ಆತಿಥಿಗಳಿಗಾಗಿ ತಯಾರಿಸುತ್ತಿದ್ದ ಆಹಾರದಲ್ಲಿ ವಿಷ ಬೆರೆಸಿದ್ದ' ಎಂದು ಮಹೇಶ್‌ ವಿವರಿಸಿದ್ದಾರೆ.

'ಸ್ಥಳದಲ್ಲಿದ್ದವರು ವಿಷ ಬೆರೆಸದಂತೆ ತಡೆಯಲು ಯತ್ನಿಸಿದರೂ, ಸಾಧ್ಯವಾಗಿರಲಿಲ್ಲ. ಕಿಡಿಗೇಡಿ, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸೆರೆಗೆ ಬಲೆ ಬೀಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.