ADVERTISEMENT

ನಾಸಿಕ್‌: ಹುಸಿ ಬಾಂಬ್‌ ಕರೆ, ತಡವಾದ ನಾಸಿಕ್‌–ಹೈದರಾಬಾದ್‌ ವಿಮಾನ ಪ್ರಯಾಣ

ಪಿಟಿಐ
Published 28 ಮಾರ್ಚ್ 2021, 8:19 IST
Last Updated 28 ಮಾರ್ಚ್ 2021, 8:19 IST
ವಿಮಾನ–ಸಾಂದರ್ಭಿಕ ಚಿತ್ರ
ವಿಮಾನ–ಸಾಂದರ್ಭಿಕ ಚಿತ್ರ   

ನಾಸಿಕ್: ಬಾಂಬ್‌ ಬೆದರಿಕೆ ಕರೆ ಬಂದ ಕಾರಣ ಅಲೈಯನ್ಸ್‌ ಏರ್‌ನ ನಾಸಿಕ್‌–ಹೈದರಾಬಾದ್‌ ಮಾರ್ಗದ ವಿಮಾನವು ಶನಿವಾರ ರಾತ್ರಿ ತಡವಾಗಿ ಟೇಕ್‌ ಆಫ್‌ ಆಗಿದೆ. ತಪಾಸಣೆ ಬಳಿಕ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ.

ಹುಸಿ ಬಾಂಬ್‌ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನದಲ್ಲಿ ಆಸನ ಪಡೆಯಲು ವಿಫಲನಾದ ವ್ಯಕ್ತಿಯೊಬ್ಬರು ಈ ಕೃತ್ಯ ಎಸಗಿದ್ದಾರೆ.

ವಿಮಾನ ರಾತ್ರಿ 8.25ಕ್ಕೆ ನಾಸಿಕ್‌ನಿಂದ ಹೊರಡಬೇಕಿತ್ತು. ಅದಕ್ಕೂ 20 ನಿಮಿಷ ಮುನ್ನ ವ್ಯಕ್ತಿಯೊಬ್ಬರು ನಾಸಿಕ್‌ ಗ್ರಾಮಾಂತರ ಪೊಲೀಸ್‌ ಠಾಣೆಗೆ ಕರೆ ಮಾಡಿ, ವಿಮಾನದಲ್ಲಿ ಬಾಂಬ್ ಇರುವ ಕುರಿತು ಮಾಹಿತಿ ನೀಡಿದರು. ಕೂಡಲೇ ಪೊಲೀಸರು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಿದರು. ಆದರೆ ಬಾಂಬ್ ಅಥವಾ ಇತರ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ. ಬಳಿಕ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ADVERTISEMENT

ಹೈದರಾಬಾದ್‌ಗೆ ಹೋಗಲು ವಿಮಾನಯಾನ ಸಂಸ್ಥೆಯೊಂದಿಗೆ ಟಿಕೆಟ್ ಕಾಯ್ದಿರಿಸಿದ್ದ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಎಂಜಿನಿಯರ್ ಪಬ್ಬಿನೆಡಿ ವೀರೇಶ್ ವೆಂಕಟ್ ನಾರಾಯಣ್ ಮೂರ್ತಿ (33) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಅವರ ಟಿಕೆಟ್‌ನ ಪಿಎನ್ಆರ್ ಅಪ್‌ಡೇಟ್‌ ಆಗಿರಲಿಲ್ಲ. ಆದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತೊಂದು ಟಿಕೆಟ್ ಪಡೆಯಲು ಹೇಳಿದ್ದರು. ಗರ್ಭಿಣಿ ಪತ್ನಿಯನ್ನು ತುರ್ತಾಗಿ ಕಾಣಬೇಕು ಎಂಬ ಕಾರಣಕ್ಕೆ ಟಿಕೆಟ್ ಖರೀದಿಸಿದ್ದ ಅವರು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದರು. ಬಳಿಕ ಹುಸಿ ಬಾಂಬ್‌ ಕರೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.