ADVERTISEMENT

ಮುಂಬೈ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಮಾಲೀಕರ ವಿರುದ್ಧ ಎಫ್‌ಐಆರ್

ಪಿಟಿಐ
Published 23 ಅಕ್ಟೋಬರ್ 2021, 9:04 IST
Last Updated 23 ಅಕ್ಟೋಬರ್ 2021, 9:04 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಮುಂಬೈ: ನಗರದ ಕರಿ ರಸ್ತೆ ಪ್ರದೇಶದಲ್ಲಿರುವ 61 ಅಂತಸ್ತಿನ ಬೃಹತ್‌ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅವಿಘ್ನ ಪಾರ್ಕ್‌ ವಸತಿ ಸಮ್ಮುಚ್ಛಯದ 19ನೇ ಮಹಡಿಯಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು.

ʼವಸತಿ ಸಮ್ಮುಚ್ಛಯದ ಮಾಲೀಕರು, ಅಲ್ಲಿನ ನಿವಾಸಿಗಳು, ಅಗ್ನಿ ಸುರಕ್ಷತೆ ನಿರ್ವಹಣೆಯ ಗುತ್ತಿಗೆದಾರ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ 336 (ಬೇಜವಾಬ್ದಾರಿ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದು), ಸೆಕ್ಷನ್‌ 304 (ಎ) (ನಿರ್ಲಕ್ಷ್ಯದಿಂದ ಪ್ರಾಣ ಹಾನಿಗೆ ಕಾರಣವಾದದ್ದು) ಮತ್ತು ಮಹಾರಾಷ್ಟ್ರ ಅಗ್ನಿ ಅಪಾಯ ತಡೆ ಮತ್ತು ಜೀವ ಸುರಕ್ಷತೆ ಕ್ರಮಗಳ ಕಾಯ್ದೆ ಅಡಿಯಲ್ಲಿ ಕಲಾಚೌಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶುಕ್ರವಾರ ಬೆಳಗ್ಗೆ 11.45ರ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಸೆಕ್ಯುರಿಟಿ ಗಾರ್ಡ್ ಅರುಣ್‌ ತಿವಾರಿ (30) ಎನ್ನುವವರು ಮಹಡಿಯಲ್ಲಿ ಸಿಲುಕಿಕೊಂಡಿದ್ದರು. ಪ್ರಾಣ ಉಳಿಸಿಕೊಳ್ಳಲು ಕೆಲಕಾಲ ಬಾಲ್ಕನಿಯ ಸರಳುಗಳನ್ನು ಹಿಡಿದುಕೊಂಡಿದ್ದ ಅವರು, ಬಳಿಕ ಅಲ್ಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.

ಮಹಡಿಯಲ್ಲೇ ಸಿಲುಕಿದ್ದ 16 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು.

ತನಿಖೆ ಪ್ರಗತಿಯಲ್ಲಿದೆ ಎಂದಿರುವ ಪೊಲೀಸರು, ʼಆರಂಭದಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತುʼ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.