ADVERTISEMENT

ಮಹಾರಾಷ್ಟ್ರ: ಫಡಣವೀಸ್ ಪುನರಾಗಮನ– ಸ್ವರೂಪ ಬೇರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2022, 20:41 IST
Last Updated 30 ಜೂನ್ 2022, 20:41 IST
ಫಡಣವೀಸ್
ಫಡಣವೀಸ್    

ಮುಂಬೈ:‘ನಾನು ಮತ್ತೆ ಬರುತ್ತೇನೆ’ ಎಂದು ಪದೇ ಪದೇಹೇಳುತ್ತಿದ್ದ ದೇವೇಂದ್ರ ಫಡಣವೀಸ್ ತಮ್ಮ ಮಾತನ್ನು ನಿಜವಾಗಿಸಿದ್ದಾರೆ. ಆದರೆ ಅವರ ಆಗಮನದ ಸ್ವರೂಪ ಮಾತ್ರ ಭಿನ್ನ ಹಾಗೂ ಅಷ್ಟೇ ಅನಿರೀಕ್ಷಿತವೂ ಆಗಿದೆ. ಎರಡು ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಫಡಣವೀಸ್ ಅವರು, ಉದ್ಧವ್ ಠಾಕ್ರೆ ಅವರ ನೇತೃತ್ವದ ಸರ್ಕಾರವನ್ನು ಉರುಳಿಸಿದ ಬಳಿಕ ಉಪಮುಖ್ಯಮಂತ್ರಿಯಾಗಿ ವಾಪಸಾಗಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ‘ನಾನು ಮತ್ತೆ ಬರುತ್ತೇನೆ’ ಎಂಬ ಫಡಣವೀಸ್ ಅವರ ಘೋಷಣೆ ಸಾಕಷ್ಟು ಪ್ರಸಿದ್ಧವಾಗಿತ್ತು. ಆದರೆ ಅವರು ಅಂದುಕೊಂಡಂತೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಆದರೂ, ಅಜಿತ್ ಪವಾರ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಮರಳಿದ್ದರು. ಆದರೆ ಅವರ ಹುದ್ದೆಯ ಆಯುಷ್ಯ ಕೇವಲ 80 ಗಂಟೆಯದ್ದಾಗಿತ್ತು.

ತಾಳ್ಮೆಗೆ ಹೆಸರಾದ ಫಡಣವೀಸ್, ‘ಚಾಣಕ್ಯ’ ಎನಿಸಿಕೊಂಡವರು. ಸರಿಯಾದ ಅವಕಾಶಕ್ಕಾಗಿ
ಕಾದಿದ್ದು, ಶಿವಸೇನಾ ಮೇಲೆ ‘ನಿರ್ದಿಷ್ಟ ದಾಳಿ’ ಮಾಡಿದ್ದಾರೆ. ಅವರು ಶಿವಸೇನಾವನ್ನು ಎರಡು ಭಾಗವಾಗಿಸುವಲ್ಲಿ ಯಶಸ್ವಿಯಾಗಿದ್ದು ನಿಜವಾದರೂ, ಬಿಜೆಪಿ ವರಿಷ್ಠರ ಯೋಜನೆಯನ್ನು ಅರಿಯುವಲ್ಲಿ ವಿಫಲರಾಗಿದ್ದೂ ಅಷ್ಟೇ ಸತ್ಯ.

ADVERTISEMENT

ಮೇ 1ರಂದು ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ತಮ್ಮ ಮಾತನ್ನು ಪುನರುಚ್ಚರಿಸಿದ್ದರು. ಹೀಗೆ ಹೇಳಿದ ಒಂದೂವರೆತಿಂಗಳಲ್ಲಿ ರಾಜ್ಯಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ‘ಮಹಾ ವಿಕಾಸ ಆಘಾಡಿ’ ಸರ್ಕಾರಕ್ಕೆ ಪೆಟ್ಟು ಕೊಟ್ಟರು. ಎರಡೇ ತಿಂಗಳಲ್ಲಿ ಶಿಂಧೆ ನೇತೃತ್ವದ ಸರ್ಕಾರ ರಚನೆಯ ‘ಕಿಂಗ್ ಮೇಕರ್’ ಆಗಿ ಹೊರಹೊಮ್ಮಿದ್ದಾರೆ.

‘ಶ್ರೀಸಾಮಾನ್ಯ’ ಹಾಗೂ ‘ಶುದ್ಧಹಸ್ತ’ ಎಂಬ ಶ್ರೇಯದ ಫಡಣವೀಸ್ ಮಹಾರಾಷ್ಟ್ರ ಘಟಾನುಘಟಿ ನಾಯಕರನ್ನು ಹಿಂದೆ ಸರಿಸಿ ಮುಂಚೂಣಿಗೆ ಬಂದಿದ್ದರೂ, ಈ ಬಾರಿಯ ಬೆಳವಣಿಗೆ ಗಮನಿಸಿದರೆ ಅವರಿಗೆ ಹಿಂಬಡ್ತಿಯಾಗಿದೆ ಎನ್ನಬಹುದು.

ನಾಗ್ಪುರ ಮೂಲದ ಅವರು, ಮೃದುಭಾಷಿ, ಉತ್ತಮ ವಾಗ್ಮಿ, ಜನರನ್ನು ಸೆಳೆಯುವ ನಾಯಕ ಎಂದು ಕರೆಸಿಕೊಂಡಿದ್ದಾರೆ. ಉತ್ತಮ ಶೈಕ್ಷಣಿಕ ಹಿನ್ನೆಲೆಯ ಇವರಬೆನ್ನಿಗೆ ಆರ್‌ಎಸ್‌ಎಸ್‌ ಇದೆ. ಐದು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ.ಮರಾಠಾ ಪ್ರಾಬಲ್ಯದಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದಿಂದ ಬಂದು ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇವರ ತಂದೆ ಗಂಗಾಧರ ರಾವ್ ಫಡಣವೀಸ್ ಅವರು ಪರಿಷತ್ ಸದಸ್ಯರಾಗಿ, ತಾಯಿ ಸರಿತಾ ಫಡಣವೀಸ್ ಅವರು
ವಿದರ್ಭ ಗೃಹಮಂಡಳಿಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

1970ರ ಜುಲೈ 22ರಂದು ಜನಿಸಿದ ಇವರು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ಬರ್ಲಿನ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾರೆ. ನಾಗ್ಪುರದ ಪುರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿ, ಭಾರತದ ಎರಡನೇ ಅತಿಕಿರಿಯ ವಯಸ್ಸಿನ ಮೇಯರ್ ಎಂಬ ಶ್ರೇಯಕ್ಕೆಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.