ADVERTISEMENT

ಮಹಾರಾಷ್ಟ್ರ ರಾಜಕೀಯ: ಕುತೂಹಲ ಸೃಷ್ಟಿಸಿದ ನಿತಿನ್ ಗಡ್ಕರಿ – ಅಹ್ಮದ್ ಪಟೇಲ್ ಭೇಟಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:04 IST
Last Updated 6 ನವೆಂಬರ್ 2019, 10:04 IST
ಅಹ್ಮದ್ ಪಟೇಲ್ (ಸಂಗ್ರಹ ಚಿತ್ರ)
ಅಹ್ಮದ್ ಪಟೇಲ್ (ಸಂಗ್ರಹ ಚಿತ್ರ)   

ನವದೆಹಲಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ–ಶಿವಸೇನಾ ಮೈತ್ರಿ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿರುವ ಸಂದರ್ಭದಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬುಧವಾರ ಬೆಳಿಗ್ಗೆ ದೆಹಲಿಯ ಮೋತಿಲಾಲ್ ನೆಹರು ಮಾರ್ಗದಲ್ಲಿರುವ ಗಡ್ಕರಿ ನಿವಾಸಕ್ಕೆ ತೆರಳಿದ ಅಹ್ಮದ್ ಪಟೇಲ್ ಮಾತುಕತೆ ನಡೆಸಿದರು. ಬಳಿಕ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಶಿವಸೇನಾಗೆ ಬಾಹ್ಯ ಬೆಂಬಲ ನೀಡಲು ಮಹಾರಾಷ್ಟ್ರದ ಕೆಲವು ಕಾಂಗ್ರೆಸ್‌ ನಾಯಕರು ಒಲವು ಹೊಂದಿದ್ದರು. ಆ ಕುರಿತು ಚರ್ಚೆಯೂ ನಡೆದಿತ್ತು. ಆದರೆ ಭಿನ್ನ ಸಿದ್ಧಾಂತ ಹೊಂದಿರುವ ಶಿವಸೇನಾಗೆ ಬೆಂಬಲ ನೀಡುವುದಿಲ್ಲ ಎಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗಡ್ಕರಿ ಅವರನ್ನುಅಹ್ಮದ್ ಪಟೇಲ್ ಭೇಟಿಯಾಗಿರುವುದು ಕುತೂಹಲ ಸೃಷ್ಟಿಸಿದೆ.

ಶಿವಸೇನಾಗೆ ಬೆಂಬಲನೀಡುವುದಿಲ್ಲ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ. ‘ಬಿಜೆಪಿ–ಶಿವಸೇನಾಗೆ ಸರ್ಕಾರ ರಚಿಸಲು ಜನಾದೇಶ ಸಿಕ್ಕಿದೆ. ಅದರಂತೆ ಅವರು ಸರ್ಕಾರ ರಚಿಸಬೇಕು. ನಮಗೆ ಪ್ರತಿಪಕ್ಷ ಸ್ಥಾನದಲ್ಲಿ ಕೆಲಸ ಮಾಡಲು ಜನರು ಹೇಳಿದ್ದಾರೆ. ಅಲ್ಲಿ ಕುಳಿತು ರಾಜ್ಯದ ಅಭಿವೃದ್ಧಿಗಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದು ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.