ADVERTISEMENT

Ganesh Naik vs Eknath Shinde: ಶಿಂದೆ ಕೋಟೆಯಲ್ಲಿ ಗಣೇಶ್‌ ನಾಯ್ಕ್‌ ‘ದರ್ಬಾರ್’

ಬಿಜೆಪಿ, ಶಿವಸೇನಾ ನಡುವೆ ಬಿಕ್ಕಟ್ಟು ತೀವ್ರ?

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 12:43 IST
Last Updated 24 ಫೆಬ್ರುವರಿ 2025, 12:43 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಅತ್ತ ಪ್ರಯಾಗರಾಜ್‌ನಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದರೆ, ಅರಣ್ಯ ಸಚಿವ ಗಣೇಶ್ ನಾಯ್ಕ್‌ ಅವರು ಇತ್ತ ಥಾಣೆಯಲ್ಲಿ ‘ಜನತಾ ದರ್ಬಾರ್’ ನಡೆಸಿದ್ದಾರೆ. ಇದು ಮಹಾಯುತಿ ಮೈತ್ರಿಕೂಟದ ಬಿಜೆಪಿ ಮತ್ತು ಶಿವಸೇನಾ ನಡುವಿನ ಶೀತಲ ಸಮರವನ್ನು ತೀವ್ರಗೊಳಿಸುವಂತೆ ಇದೆ. ಥಾಣೆಯು ಶಿಂದೆ ಅವರ ನೆಲೆಯೂ ಹೌದು. 

ನಾಯ್ಕ್ ಅವರು ಬಿಜೆಪಿ ಸೇರುವ ಮೊದಲು ಅವಿಭಜಿತ ಶಿವಸೇನಾ ಹಾಗೂ ಅವಿಭಜಿತ ಎನ್‌ಸಿಪಿಯಲ್ಲಿ ಇದ್ದವರು. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅವರು ‘ಜನತಾ ದರ್ಬಾರ್’ ಎಂಬ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಶಿಂದೆ ಅವರು ಥಾಣೆ ಜಿಲ್ಲೆಯ ಉಸ್ತುವಾರಿಯೂ ಹೌದು. ನಾಯ್ಕ್ ಅವರು ಪಾಲಘರ್ ಜಿಲ್ಲೆಯ ಉಸ್ತುವಾರಿ.

ಸಚಿವರು ತಮ್ಮ ಪಕ್ಷದ ಕಚೇರಿಯಲ್ಲಿ, ಸಚಿವರ ಬಂಗಲೆಯಲ್ಲಿ ಅಥವಾ ತಮ್ಮ ಜಿಲ್ಲೆಯಲ್ಲಿ ‘ಜನತಾ ದರ್ಬಾರ್’ ಆಯೋಜಿಸುವುದು ವಾಡಿಕೆ. ಆದರೆ ನಾಯ್ಕ್‌ ಅವರು ಶಿಂದೆ ಅವರು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ನಡೆಸಿದ್ದಾರೆ.

ADVERTISEMENT

‘ರಾಜಕಾರಣದಲ್ಲಿ ನಾಯಕತ್ವವು ಚಲನಶೀಲವಾಗಿರುತ್ತದೆ. ಅದು ಜನರ ಭಾವನೆಗಳಿಗೆ ಅನುಗುಣವಾಗಿ ಬದಲಾಗುತ್ತದೆ... ರಾಜಕೀಯದಲ್ಲಿ ಯಾವ ನಾಯಕನೂ ಶಾಶ್ವತವಾಗಿ ಪ್ರಬಲನಾಗಿರುವುದಿಲ್ಲ. ಜನರು ಒಬ್ಬ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದು ಆ ವ್ಯಕ್ತಿಯ ನಾಯಕತ್ವವನ್ನು ತೀರ್ಮಾನಿಸುತ್ತದೆ’ ಎಂದು ನಾಯ್ಕ್ ಹೇಳಿದ್ದಾರೆ.

‘ಮಹಾಯುತಿ ಮೈತ್ರಿಕೂಟದ ಪಕ್ಷಗಳ ನಡುವೆ ಸ್ಪರ್ಧೆ ಇಲ್ಲ’ ಎಂದೂ ಅವರು ಹೇಳಿದ್ದಾರೆ. ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಉದ್ದೇಶದಿಂದ ಥಾಣೆ ಮತ್ತು ಪಾಲಘರ್‌ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಥಾಣೆಯಲ್ಲಿ ಜನತಾ ದರ್ಬಾರ್ ಆಯೋಜಿಸುವ ಮೊದಲು ನಾಯ್ಕ್‌ ಅವರ ಪುತ್ರ ಸಂಜೀವ್ ನಾಯ್ಕ್ ಅವರು ಬಿಜೆಪಿಯ ಸ್ಥಳೀಯ ನಾಯಕರ ಜೊತೆ ಹಲವು ಬಾರಿ ಸಭೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.