ADVERTISEMENT

ಮಹಾರಾಷ್ಟ್ರ ಸರ್ಕಾರ | ಎನ್‌ಸಿಪಿಗೆ ಉಪಮುಖ್ಯಮಂತ್ರಿ, ಕಾಂಗ್ರೆಸ್‌ಗೆ ಸ್ಪೀಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2019, 4:46 IST
Last Updated 28 ನವೆಂಬರ್ 2019, 4:46 IST
ಶರದ್ ಪವಾರ್, ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ
ಶರದ್ ಪವಾರ್, ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಇಂದು ಸಂಜೆ 6.40ಕ್ಕೆ ಪ್ರತಿಷ್ಠಿತ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉದ್ಧವ್ ಠಾಕ್ರೆ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಮುಂಬೈನ ಶಿವಾಜಿ ಪಾರ್ಕ್‌ ಸುತ್ತಮುತ್ತಲೂ ‘ಠಾಕ್ರೆ ಸರ್ಕಾರ್’ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಮಹಾರಾಷ್ಟ್ರ ಸರ್ಕಾರದ ಒಟ್ಟು 43 ಸಚಿವ ಸ್ಥಾನಗಳು ಮೂರೂ ಪಕ್ಷಗಳಿಗೆ ಹಂಚಿಕೆಯಾಗಲಿವೆ. ಈ ಪೈಕಿ ಶಿವಸೇನಾ ಮತ್ತು ಎನ್‌ಸಿಪಿಗೆ ತಲಾ 15, ಕಾಂಗ್ರೆಸ್‌ಗೆ 12 ಸ್ಥಾನಗಳು ಮೀಸಲು ಎಂಬ ಮಾತು ಈ ಹಿಂದೆ ಕೇಳಿ ಬರುತ್ತಿತ್ತು. ಆದರೆ ಮೈತ್ರಿಯ ಭಾಗವಾಗಿರುವಸಣ್ಣಪಕ್ಷಗಳಾದ ಸ್ವಾಭಿಮಾನಿ ಸಂಘಟನ ಮತ್ತು ಸಮಾಜವಾದಿ ಪಕ್ಷಕ್ಕೂ ಸರ್ಕಾರದಲ್ಲಿ ಅವಕಾಶ ನೀಡಬೇಕಿದೆ. ಹೀಗಾಗಿ ಈ ಲೆಕ್ಕಾಚಾರ ತುಸು ಹೆಚ್ಚು ಕಡಿಮೆಯಾಗಬಹುದು ಎನ್ನಲಾಗುತ್ತಿದೆ.

ಪ್ರಭಾವಿ ಖಾತೆಗಳಾದ ಗೃಹ, ಹಣಕಾಸು ಮತ್ತು ಕಂದಾಯ ಪಕ್ಷಗಳ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಸ್ಪೀಕರ್‌ ಸ್ಥಾನವನ್ನು ಕಾಂಗ್ರೆಸ್ ಮಾತ್ರ ಕೋರಿದೆ. ಎನ್‌ಸಿಪಿ ಮತ್ತು ಶಿವಸೇನಾ ಪಕ್ಷಗಳು ಸ್ಪೀಕರ್ ಹುದ್ದೆಯತ್ತ ಆಸಕ್ತಿ ತೋರಿಲ್ಲ.

ADVERTISEMENT

ಯಾರಿಗೆ ಯಾವ ಖಾತೆ?

ಪ್ರಮಾಣ ವಚನದ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಖಾತೆಗಳ ಹಂಚಿಕೆಲೆಕ್ಕಾಚಾರಗಳು ಗರಿಗೆದರಿವೆ. ಶಿವಸೇನಾ,ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಡುವೆ ಏರ್ಪಟ್ಟಿರುವ‘ಮಹಾ ವಿಕಾಸ ಅಗಾಡಿ’ ಹೆಸರಿನಮೈತ್ರಿಕೂಟದ ನಡುವೆ ಅಧಿಕಾರ ಹಂಚಿಕೆಯ ಮಾತುಕತೆ ಅಂತಿಮ ಹಂತ ತಲುಪಿದೆ.

ಮುಖ್ಯಮಂತ್ರಿ ಹುದ್ದೆ ಶಿವಸೇನಾ ಬಳಿಯೇ ಉಳಿಯಲಿರುವುದರಿಂದ, ಎರಡನೇ ಅತಿದೊಡ್ಡ ಪಕ್ಷ ಎನ್‌ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಕಾಂಗ್ರೆಸ್‌ಗೆ ಸ್ಪೀಕರ್‌ ಸ್ಥಾನ ಸಿಗುವುದು ಬಹುತೇಕ ಅಂತಿಮಗೊಂಡಿದೆ. ಮೈತ್ರಿಕೂಟದ ಪಕ್ಷಗಳ ನಡುವೆ ಬುಧವಾರ ಸಂಜೆ ನಡೆದ ಸುದೀರ್ಘ ಆರು ತಾಸುಗಳ ಸಭೆಯ ನಂತರ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಈ ಮಾಹಿತಿ ಪ್ರಕಟಿಸಿದರು.

‘ಸರ್ಕಾರದಲ್ಲಿ ಕೇವಲ ಒಂದು ಉಪಮುಖ್ಯಮಂತ್ರಿ ಸ್ಥಾನವಿರುತ್ತೆ. ಅದನ್ನುಎನ್‌ಸಿಪಿ ಪಡೆದುಕೊಳ್ಳಲಿದೆ’ ಎಂದು ಪಟೇಲ್ ಸ್ಪಷ್ಟಪಡಿಸಿದರು. ಈ ಮೊದಲು ಉದ್ಧವ್ ಠಾಕ್ರೆ ಸಂಪುಟದಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳಿರುತ್ತವೆ. ಒಂದು ಎನ್‌ಸಿಪಿ ಮತ್ತೊಂದನ್ನು ಕಾಂಗ್ರೆಸ್‌ಗೆ ಹಂಚಿಕೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿತ್ತು.

‘ಮುಖ್ಯಮಂತ್ರಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಸಂಖ್ಯೆಯು ಇನ್ನೂ ಅಂತಿಮಗೊಂಡಿಲ್ಲ. ಮಿತ್ರಪಕ್ಷಗಳ ತಲಾ ಒಬ್ಬರು ಅಥವಾ ಇಬ್ಬರು ಪ್ರಮಾಣ ವಚನ ಸ್ವೀಕರಿಸಬಹುದು. ಕಾಂಗ್ರೆಸ್‌ಗೆ ಸ್ಪೀಕರ್‌ ಸ್ಥಾನ ಸಿಗುವುದು ಖಚಿತ. ಆದರೆ ಸ್ಪೀಕರ್‌ ಯಾರಾಗಬೇಕು ಎಂಬುದನ್ನು ಮೂರೂ ಪಕ್ಷಗಳು ಒಮ್ಮತದಿಂದ ನಿರ್ಧರಿಸುತ್ತವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.