ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಬಿಜೆಪಿ–ಶಿವಸೇನಾ ಮೈತ್ರಿ ಅಬಾಧಿತ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮತ್ತೆ ಮುಂದುವರಿಯಲಿದೆ.

ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಾಯಕರನ್ನು ಬಿಜೆಪಿಗೆ ಬರ ಮಾಡಿಕೊಂಡ ನಂತರ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ಉಭಯ ಪಕ್ಷಗಳು ಒಟ್ಟಿಗೆ ಚುನಾವಣೆ ಎದುರಿಸಲಿವೆ. ಈ ಬಾರಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಹಿಂದಿನ ದಾಖಲೆಗಳನ್ನು ನಮ್ಮ ಮೈತ್ರಿ ಮುರಿಯಲಿದೆ’ ಎಂದರು.

ಎನ್‌ಸಿಪಿಯ ಮೂವರು ಹಾಗೂ ಕಾಂಗ್ರೆಸ್‌ನ ಒಬ್ಬ ಶಾಸಕರು ಮಂಗಳವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಫಡಣವೀಸ್‌ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ ಸಮ್ಮುಖದಲ್ಲಿ ಅವರು ಬಿಜೆಪಿಗೆ ಬುಧವಾರ ಸೇರ್ಪಡೆಯಾದರು.

ADVERTISEMENT

ಇತ್ತೀಚೆಗೆ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಾಯಕರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ. ಪಕ್ಷ ತೊರೆದು ಬಂದವರಿಗೆ ಟಿಕೆಟ್‌ ನೀಡಬೇಕಾದ ಒತ್ತಡದಲ್ಲಿರುವ ಬಿಜೆಪಿ ಈ ಬಾರಿ ಶಿವಸೇನಾ ಜೊತೆ ಮೈತ್ರಿಗೆ ಮುಂದಾಗುವುದಿಲ್ಲ ಎಂಬ ವದಂತಿ ಇತ್ತು. ಫಡಣವೀಸ್‌ ಅವರ ಈ ಹೇಳಿಕೆಯಿಂದ ಇಂತಹ ಎಲ್ಲ ವದಂತಿಗೆ ತೆರೆಬಿದ್ದಿದೆ.

ಈ ಎರಡೂ ಪಕ್ಷಗಳು 2014ರಲ್ಲಿ ಪ್ರತ್ಯೇಕವಾಗಿಯೇ ಚುನಾವಣೆಯನ್ನು ಎದುರಿಸಿದ್ದವು. ಫಲಿತಾಂಶ ಹೊರ ಬಿದ್ದ ನಂತರ ಸರ್ಕಾರ ರಚನೆಗಾಗಿ ಎರಡೂ ಪಕ್ಷಗಳು ಕೈಜೋಡಿಸಿವೆ.

ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ತಲುಪುವ ದೃಷ್ಟಿಯಿಂದ ‘ಮಹಾಜನಾದೇಶ ಯಾತ್ರಾ’ ಎಂಬ ತಿಂಗಳ ಅವಧಿಯ ಕಾರ್ಯಕ್ರಮಕ್ಕೆ ಫಡಣವೀಸ್‌ ಚಾಲನೆ ನೀಡಲಿದ್ದಾರೆ. ಗುರುವಾರ (ಆಗಸ್ಟ್‌ 1) ಅಮರಾವತಿ ಜಿಲ್ಲೆಯಿಂದ ಈ ಯಾತ್ರೆ ಆರಂಭಗೊಳ್ಳಲಿದ್ದು, ಆಗಸ್ಟ್‌ 31ರಂದು ನಾಸಿಕ್‌ನಲ್ಲಿ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.