ADVERTISEMENT

ಮಹಾರಾಷ್ಟ್ರ: ಮೂವರು ಮಕ್ಕಳನ್ನು ಹೊಂದಿದ್ದ ಜೈಲು ಅಧೀಕ್ಷಕಿ ಕೆಲಸದಿಂದ ವಜಾ

ಮಹಾರಾಷ್ಟ್ರ ನಾಗರಿಕ ಸೇವೆಗಳ ‘ಸಣ್ಣ ಕುಟುಂಬ’ ನಿಯಮ ಉಲ್ಲಂಘನೆ

ಪಿಟಿಐ
Published 27 ಏಪ್ರಿಲ್ 2021, 13:15 IST
Last Updated 27 ಏಪ್ರಿಲ್ 2021, 13:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫುಣೆ: ಮಹಾರಾಷ್ಟ್ರ ನಾಗರಿಕ ಸೇವೆಗಳ ‘ಸಣ್ಣ ಕುಟುಂಬ’ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಪುಣೆಯ ಮಹಿಳಾ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಮಹಾರಾಷ್ಟ್ರ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಎನ್.ಎಸ್. ಕರಾದ್ ಅವರು ಸೋಮವಾರ ಹೊರಡಿಸಿದ ಆದೇಶದಲ್ಲಿ, ‘ಪುಣೆಯ ಜಿಲ್ಲಾ ಕಾರಾಗೃಹದಲ್ಲಿ ಅಧೀಕ್ಷಕರಾಗಿ ನೇಮಕಗೊಂಡಿರುವ ಸ್ವಾತಿ ಜೋಗದಂಡ್ ಅವರು 2012ರಲ್ಲಿ ಇಲಾಖೆಯಲ್ಲಿ ನೇಮಕಗೊಳ್ಳುವ ಮೊದಲು ತನಗೆ ಮೂವರು ಮಕ್ಕಳಿದ್ದಾರೆ ಎನ್ನುವ ಮಾಹಿತಿಯನ್ನು ಮರೆಮಾಚಿದ್ದಾರೆ’ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ನಾಗರಿಕ ಸೇವೆಗಳ (ಸಣ್ಣ ಕುಟುಂಬದ ಘೋಷಣೆ) ನಿಯಮಗಳು-2005ರ ಪ್ರಕಾರ, ಅಭ್ಯರ್ಥಿಯು ‘ಸಣ್ಣ ಕುಟುಂಬ’ವನ್ನು ಹೊಂದಿರಬೇಕು. ಸಣ್ಣ ಕುಟುಂಬವನ್ನು ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಎಂದು ವ್ಯಾಖ್ಯಾನಿಸಲಾಗಿದೆ.

ADVERTISEMENT

ಮಹಾರಾಷ್ಟ್ರದಲ್ಲಿ 2005ರ ನಂತರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಯು ನಿಯಮಗಳ ಪ್ರಕಾರ ಸರ್ಕಾರಿ ಕೆಲಸಕ್ಕೆ ಅರ್ಹರಲ್ಲ.

ಉದ್ಯೋಗಕ್ಕೆ ಸೇರುವ ಸಮಯದಲ್ಲಿ ಸ್ವಾತಿ ಜೋಗದಂಡ್ ಅವರು ತಮಗೆ ಮೂವರು ಮಕ್ಕಳಿರುವುದನ್ನು ಮರೆಮಾಚಿದ್ದಾರೆ ಎಂದು ಅವರ ವಿರುದ್ಧ ಇಲಾಖೆಗೆ ದೂರು ಸಲ್ಲಿಸಲಾಗಿತ್ತು. ಇಲಾಖೆಯ ವಿಚಾರಣೆಯಲ್ಲಿ ಈ ದೂರಿಗೆ ಸಾಕ್ಷ್ಯಾಧಾರಗಳು ದೊರೆತ ಕಾರಣ ಸ್ವಾತಿ ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.