
ಪಾಲ್ಘರ್: ಶಾಲೆಗೆ ತಡವಾಗಿ ಬಂದಿದ್ದಕ್ಕೆ ಬಾಲಕಿಗೆ ನೂರು ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿದ್ದು, ಅಸ್ವಸ್ಥ ಬಾಲಕಿ ವಾರದ ಬಳಿಕ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ವಸಾಯಿ ಪ್ರದೇಶದ ಸತಿವಲಿಯಲ್ಲಿರುವ ಖಾಸಗಿ ಶಾಲೆಯ ವಿದ್ಯಾರ್ಥಿನಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಶಿಕಾ ಶುಕ್ರವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸದಸ್ಯರ ಪ್ರಕಾರ, ನವೆಂಬರ್ 8ರಂದು ತಡವಾಗಿ ಶಾಲೆಗೆ ಬಂದಿದ್ದಕ್ಕಾಗಿ ಅಂಶಿಕಾ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 100 ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗಿತ್ತು.
ಬಾಲಕಿಗೆ ಆರೋಗ್ಯ ಸಮಸ್ಯೆಗಳಿದ್ದರೂ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಲಾಗಿತ್ತು ಎಂದು ವಸಾಯಿಯ ಎಂಎನ್‌ಎಸ್ ನಾಯಕ ಸಚಿನ್ ಮೋರ್ ಹೇಳಿದ್ದಾರೆ.
‘ಆ ಬಾಲಕಿ ಎಷ್ಟು ಬಸ್ಕಿ ಹೊಡೆದಿದ್ದಾಳೆ. ಅದರಿಂದಾಗಿಯೇ ಆಕೆ ಮೃತಪಟ್ಟಳೋ ಅಥವಾ ಬೇರೆ ಕಾರಣದಿಂದಲೋ ಎಂಬುದು ನಿಜವಾಗಿಯೂ ತಿಳಿದಿಲ್ಲ’ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದ್ದಾರೆ.
ಅಂಶಿಕಾ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆಯಿಂದ ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಗಲಂಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.