ADVERTISEMENT

ಶಿವಸೇನಾ ಸಂಸದ ವಿನಾಯಕ್ ರಾವುತ್ ಮನೆ ಮೇಲೆ ಬಾಟಲ್‌ಗಳನ್ನು ಎಸೆದ ದುಷ್ಕರ್ಮಿಗಳು

ಪಿಟಿಐ
Published 25 ಆಗಸ್ಟ್ 2021, 5:41 IST
Last Updated 25 ಆಗಸ್ಟ್ 2021, 5:41 IST
ಶಿವಸೇನಾ
ಶಿವಸೇನಾ   

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಲ್ಲಿರುವ ಶಿವಸೇನಾ ಸಂಸದ ವಿನಾಯಕ್ ರಾವುತ್ ಅವರ ಬಂಗಲೆಯ ಮೇಲೆ ಅಪರಿಚಿತ ವ್ಯಕ್ತಿಗಳು ಸೋಡಾ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮುಂಬೈನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಮಾಲ್ವನ್‌ನ ತಲ್ಗಾಂವ್‌ನ ಕರಾವಳಿಯ ರಾವುತ್‌ವಾಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ನಾಲ್ವರು ಅಪರಿಚಿತ ವ್ಯಕ್ತಿಗಳು ಬಂದು ರಾವುತ್ ಬಂಗಲೆಯ ಮೇಲೆ ಸೋಡಾ ನೀರಿನ ಬಾಟಲಿಗಳನ್ನು ಎಸೆದು, ಸ್ಥಳದಿಂದ ಪರಾರಿಯಾಗಿದ್ದಾರೆ.

ADVERTISEMENT

ಬಂಗ್ಲೋದ ಉಸ್ತುವಾರಿ ನೀಡಿರುವ ದೂರಿನ ಆಧಾರದ ಮೇಲೆ, ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಮನೆಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ವಿರುದ್ಧ ರಾಣೆ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಶಿವಸೇನೆ ಮತ್ತು ಬಿಜೆಪಿ ಬೆಂಬಲಿಗರು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಪರಸ್ಪರ ಘರ್ಷಣೆ ನಡೆಸಿದ್ದರು.

ರಾಯಗಡ ಜಿಲ್ಲೆಯಲ್ಲಿ ಮಾತನಾಡಿದ್ದ ನಾರಾಯಣ ರಾಣೆ ಅವರು, ‘ಠಾಕ್ರೆ ಅವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡುವಾಗ, ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಆಗಿದೆ ಎಂಬುದನ್ನೇ ಮರೆತು ಹೋದರು. ಪಕ್ಕದಲ್ಲಿ ಇರುವವರನ್ನು ಕೇಳಿ, ಭಾಷಣ ಮುಂದುವರಿಸಿದ್ದರು. ನಾನು ಅಲ್ಲಿಇದ್ದಿದ್ದರೆ, ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.