ADVERTISEMENT

ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿ ಗೈರು: ಬಾಲ್ಯವಿವಾಹ ಪ್ರಕರಣ ಬೆಳಕಿಗೆ

ಪಿಟಿಐ
Published 14 ಮಾರ್ಚ್ 2023, 11:36 IST
Last Updated 14 ಮಾರ್ಚ್ 2023, 11:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಬಾದ್‌: ಸದ್ಯ ನಡೆಯುತ್ತಿರುವ ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ (ಎಸ್‌ಎಸ್‌ಸಿ) ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಗೈರುಹಾಜರಾದ ಕಾರಣ ಬಾಲ್ಯವಿವಾಹದ ಪ್ರಕರಣವೊಂದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬೀಡ್‌ ಜಿಲ್ಲೆಯ ಪರ್ಲಿ ತಾಲ್ಲೂಕಿನಲ್ಲಿ ಈ ಬಾಲ್ಯವಿವಾಹ ನಡೆದಿದೆ. 16 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು 24 ವರ್ಷ ವಯಸ್ಸಿನ ವ್ಯಕ್ತಿ ಜೊತೆ ಮದುವೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗುರುತಿಸಲ್ಪಟ್ಟ 13 ಮಂದಿ ಮತ್ತು ಮದುವೆಗೆ ಹಾಜರಾದ 150ರಿಂದ 200 ಅತಿಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ನಡೆದ ಗಣಿತ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತರೊಬ್ಬರು ಮಕ್ಕಳ ಸಹಾಯವಾಣಿ– 1098ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಗ್ರಾಮ ಸೇವಕರು ವಿದ್ಯಾರ್ಥಿನಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿನಿಗೆ ಈಗಾಗಲೇ ಮದುವೆ ಮಾಡಿರುವ ವಿಚಾರ ತಿಳಿದುಬಂದಿತು. ಬಾಲ್ಯವಿವಾಹ ತಡೆ ಕಾಯ್ದೆ– 1929 ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಹಿಳೆ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪರುಷನ ಮದುವೆಯನ್ನು ಕಾನೂನು ಪ್ರಕಾರ ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.